ವಿಜಯಪುರ ಮೆಕ್ಕೆಜೋಳ ಗೋದಾಮು ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ತಲಾ 7 ಲಕ್ಷ ಪರಿಹಾರ ಘೋಷಣೆ ಮಾಡಿದೆ.
ದುರಂತದಲ್ಲಿ ಮೃತಪಟ್ಟ ಕಾರ್ಮಿಕರಿಗೆ ತಲಾ 7 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಜೊತೆಗೆ ಗಾಯಾಳುಗಳಿಗೆ ಚಿಕಿತ್ಸೆಗೆ ತಲಾ 50 ಸಾವಿರ ರೂ. ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಭಾರೀ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ ಸಚಿವ ಎಂಬಿ ಪಾಟೀಲ್ ಮಂಗಳವಾರ ಮಧ್ಯಾಹ್ನ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ಸ್ಥಿತಿಗತಿಯನ್ನು ವಿಚಾರಿಸಿದರು. ಜತೆಗೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು. ಮೃತ ಕಾರ್ಮಿಕರೆಲ್ಲರೂ ಬಿಹಾರದವರಾಗಿದ್ದು, ಅವರ ಕುಟುಂಬಕ್ಕೆ ಪಾರ್ಥಿವ ಶರೀರಗಳನ್ನು ಬೆಳಗಾವಿ ಅಥವಾ ಕಲಬುರಗಿ ವಿಮಾನ ನಿಲ್ದಾಣದ ಮೂಲಕ ಪಾಟ್ನಾಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ವಿಜಯಪುರದ ಕೈಗಾರಿಕಾ ಪ್ರದೇಶದ ಖಾಸಗಿ ಗೋದಾಮಿನಲ್ಲಿ ಆಹಾರ ಧಾನ್ಯಗಳ ಮೂಟೆಗಳು ಬಿದ್ದ ಪರಿಣಾಮ ಎಂಟು ಜನರು ಸಾವನ್ನಪ್ಪಿದ್ದರು. ಮೃತರೆಲ್ಲರೂ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದು, ಅವರನ್ನು ಬಿಹಾರದ ನಿವಾಸಿಗಳು ಎಂದು ಗುರುತಿಸಲಾಗಿದೆ. ಡಿಸೆಂಬರ್ 4 ರ ಸಂಜೆ ಈ ಘಟನೆ ನಡೆದಿದ್ದು, ಗೋದಾಮಿನಲ್ಲಿ ಇರಿಸಲಾಗಿದ್ದ ನೂರಾರು ಮೂಟೆ ಮೆಕ್ಕೆಜೋಳವು ಗೋದಾಮಿನಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ಬಿದ್ದಿದೆ. ಎಲ್ಲಾ ಕಾರ್ಮಿಕರು ಬಿಹಾರ ಮೂಲದವರು ಎಂದು ಹೇಳಲಾಗಿದೆ.