ಬೆಂಗಳೂರು : ರಾಜ್ಯದಲ್ಲಿ ಹಲವಡೆ ಮುಂಗಾರು ಮಳೆಯ ಆರ್ಭಟ ಮುಂದುವರೆದಿದ್ದು, ಹಲವಡೆ ಸಂಚಾರ ಅಸ್ಥವ್ಯಸ್ಥಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ರಾಜ್ಯದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ನಡುವೆ ಸತತ ಮಳೆಯಿಂದಾಗಿ ಹಲವು ನದಿಗಳು ತುಂಬಿ ಹರಿಯುತ್ತಿದ್ದು, ಸೇತುವೆಗಳು ಜಲಾವೃತವಾಗಿವೆ. ರಸ್ತೆಗಳಲ್ಲಿ ಮಳೆಯಿಂದಾಗಿ ಮರಗಳು ಉರುಳಿ ಬಿದ್ದ ಪರಿಣಾಮ ಮುಂದೆ ಚಲಿಸಲಾಗದೇ ವಾಹನ ಸವಾರರು ಪರದಾಡುವಂತಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ದೇವಾಲಯ ಬಳಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ದೇವಾಲಯದ ವಾಹನ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಪ್ರವಾಸಿಗರ ವಾಹನಗಳು ಮುಳುಗಡೆಯಾಗಿವೆ.
ಕೊಡಗು-ದಕ್ಷಿಣ ಕನ್ನಡ ಗಡಿ ಗ್ರಾಮ ಸಂಪಾಜೆಯಲ್ಲಿ ಹೆದ್ದಾರಿಗೆ ಬೃಹತ್ ಮರ ಉರುಳಿದೆ. ಇದರಿಂದ ಬಂಗ್ಲೆಗುಡ್ಡೆ ಬಳಿ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತಗೊಂಡಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ಮುಳುಗಿದೆ. ಮಡಿಕೇರಿ ತಾಲೂಕಿನ ಹೊದವಾಡ ರಸ್ತೆಯೂ ಮುಳುಗಿದೆ.
ದಕ್ಷಿಣ ಕನ್ನಡದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರ ಧಾರಾಕಾರ ಮಳೆ ಹಿನ್ನೆಲೆ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ, ಈ ಹಿನ್ನೆಲೆ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ. ನದಿ ದಡಕ್ಕೆ ಹೋಗದಂತೆ ಭಕ್ತರಿಗೆ ಸೂಚನೆ ನೀಡಲಾಗಿದೆ. ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಕಾಳಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಕದ್ರಾ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಕದ್ರಾ ಡ್ಯಾಂನಿಂದ ನೀರು ಬಿಡುಗಡೆ ಹಿನ್ನೆಲೆ ಮಹಾಮಾಯ ದೇಗುಲದ ಆವರಣ ಜಲಾವೃತಗೊಂಡಿದೆ. ಡ್ಯಾಂ ಸುತ್ತಮುತ್ತಲಿನ 100ಕ್ಕೂ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ.
ಬೆಳಗಾವಿ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಭಾರೀ ಮಳೆಯಿಂದಾಗಿ ಕೃಷ್ಣಾ, ವೇದಗಂಗಾ, ದೂಧಗಂಗಾ, ಘಟಪ್ರಭಾ, ಮಲಪ್ರಭಾ,ಮಾರ್ಕೆಂಡೇಯ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಕಲಬರುಗಿ ಜಿಲ್ಲೆಯ ಕಾಗಿಣಾ, ಕಮಲಾವತಿ, ಮುಲ್ಲಾಮಾರಿ, ಅಮರ್ಜಾ ನದಿಗಳಿಗೆ ಪ್ರವಾಹ ಬಂದಿದ್ದು, ಕಲಬುರಗಿ-ಸೇಡಂ, ಕಲಬುರಗಿ-ಚಿತ್ತಾಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ.