ನವದೆಹಲಿ : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಹೊರಡಿಸಿದ ಕೇಂದ್ರ ಸರ್ಕಾರದ ಲ್ಯಾಟರಲ್ ಪ್ರವೇಶಕ್ಕಾಗಿ ಹೊರಡಿಸಿದ್ದ ಜಾಹೀರಾತನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ಪ್ರಕಟಿಸಿದ್ದಾರೆ.
ಲ್ಯಾಟರಲ್ ಎಂಟ್ರಿ ಮಾರ್ಗದ ಮೂಲಕ 45 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸುವ ಜಾಹೀರಾತನ್ನು ರದ್ದುಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (ಡಿಒಪಿಟಿ) ನಿರ್ದೇಶನ ನೀಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಕೇಂದ್ರ ಲೋಕಸೇವಾ ಆಯೋಗವು ಕೇಂದ್ರ ಸರ್ಕಾರದಲ್ಲಿನ ವಿವಿಧ ಹಿರಿಯ ಹುದ್ದೆಗಳಿಗೆ ಲ್ಯಾಟರಲ್ ನೇಮಕಾತಿ ಮಾಡಿಕೊಳ್ಳುವ ಸಂಬಂಧ ‘ಪ್ರತಿಭಾವಂತ ಮತ್ತು ಉತ್ಸಾಹಿ ಭಾರತೀಯ ಪ್ರಜೆ’ಗಳಿಗಾಗಿ ಜಾಹೀರಾತು ನೀಡಿದೆ. 24 ಸಚಿವಾಲಯಗಳ ಜಂಟಿ ಕಾರ್ಯದರ್ಶಿ, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿ ಸೇರಿದಂತೆ ಒಟ್ಟು 45 ಹುದ್ದೆಗಳಿಗೆ ನೇಮಕಾತಿಗೆ ಮುಂದಾಗಿತ್ತು.
ಈ ಕ್ರಮವು ವಿರೋಧ ಪಕ್ಷಗಳು ಮತ್ತು ಜೆಡಿಯು ಮತ್ತು ಎಲ್ಜೆಪಿ ಸೇರಿದಂತೆ ಕೆಲವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಮಿತ್ರ ಪಕ್ಷಗಳಿಂದ ಟೀಕೆಗೆ ಗುರಿಯಾಗಿತ್ತು.
ಲ್ಯಾಟರಲ್ ಎಂಟ್ರಿ ಎಂದರೇನು?
ಲ್ಯಾಟರಲ್ ಎಂಟ್ರಿ ಎಂದರೆ ಕೇಂದ್ರ ಸರ್ಕಾರದಲ್ಲಿ ಮಧ್ಯಮ ಮತ್ತು ಹಿರಿಯ ಮಟ್ಟದ ಹುದ್ದೆಗಳನ್ನು ಭರ್ತಿ ಮಾಡಲು ಸಾಂಪ್ರದಾಯಿಕ ಸರ್ಕಾರಿ ಸೇವಾ ಕೇಡರ್ನ ಹೊರಗಿನ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುವುದನ್ನು ಸೂಚಿಸುತ್ತದೆ. ಈ ವಿಧಾನವನ್ನು 2017 ರಲ್ಲಿ ನೀತಿ ಆಯೋಗ ಮತ್ತು ಆಡಳಿತದ ಸೆಕ್ಟರಲ್ ಗ್ರೂಪ್ ಆಫ್ ಸೆಕ್ರೆಟರಿಗಳು ಶಿಫಾರಸು ಮಾಡಿವೆ. ಅಖಿಲ ಭಾರತ ಸೇವೆಗಳು ಮತ್ತು ಕೇಂದ್ರ ನಾಗರಿಕ ಸೇವೆಗಳಿಂದ ವೃತ್ತಿ ಅಧಿಕಾರಿಗಳನ್ನು ಮಾತ್ರ ನೇಮಿಸುವ ಸಾಂಪ್ರದಾಯಿಕ ಅಭ್ಯಾಸದಿಂದ ಹೊರಗುಳಿದ ಕೇಂದ್ರ ಸಚಿವಾಲಯದ ಉನ್ನತ ಮಟ್ಟದಲ್ಲಿ ಹೊಸ ಪ್ರತಿಭೆ ಮತ್ತು ಪರಿಣತಿಯನ್ನು ತರುವ ಗುರಿಯನ್ನು ಈ ಪರಿಕಲ್ಪನೆ ಹೊಂದಿದೆ.
ಪ್ರಧಾನಿ ಮೋದಿಯವರ ಅಧಿಕಾರಾವಧಿಯಲ್ಲಿ ಲ್ಯಾಟರಲ್ ಎಂಟ್ರಿ ಪ್ರಕ್ರಿಯೆಯನ್ನು ಔಪಚಾರಿಕವಾಗಿ ಪರಿಚಯಿಸಲಾಯಿತು, ಮೊದಲ ಹಂತದ ಖಾಲಿ ಹುದ್ದೆಗಳನ್ನು 2018 ರಲ್ಲಿ ಘೋಷಿಸಲಾಯಿತು.