ಬೆಂಗಳೂರು : ಮೇ ತಿಂಗಳ ನಂತರ ತಾ.ಪಂ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಡೆಯಲಿದೆ ಎಂದು ಹೈಕೋರ್ಟ್ ಗೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
3 ವರ್ಷಗಳಾದರೂ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ‘’ಮೇ ತಿಂಗಳ ನಂತರ ತಾ.ಪಂ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಡೆಯಲಿದೆ’’ ಎಂದು ಹೈಕೋರ್ಟ್ ಗೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಮುಂದೆ ಸರ್ಕಾರ ಮೀಸಲಾತಿ ಪಟ್ಟಿ ನೀಡಿದರೆ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗದ ಪರ ಹಿರಿಯ ವಕೀಲ ಎನ್ ಕೆ ಫಣೀಂದ್ರ ಹೇಳಿದರು.ಇದಕ್ಕೆ ಶಶಿಕಿರಣ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಮೇ ಅಂತ್ಯದೊಳಗೆ ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಕೊಡಲಾಗುತ್ತದೆ. ಜೂನ್ ಅಥವಾ ಜುಲೈ ತಿಂಗಳಲ್ಲಿ ಆಯೋಗ ಚುನಾವಣೆ ನಡೆಸಬಹುದು ಎಂದು ತಿಳಿಸಿದರು.ಒಟ್ಟಿನಲ್ಲಿ ಚುನಾವಣೆ ನಡೆಯಲು ಅಂತೂ ಇಂತು ಕಾಲ ಕೂಡಿಬರುವ ಹಾಗಿದೆ.