ಬೆಂಗಳೂರು : ವಿವಾದಿತ ‘ಹಮ್ ದೋ ಹಮಾರೆ ಬಾರಾ’ ಚಿತ್ರದ ಶೀರ್ಷಿಕೆ ಬದಲಾವಣೆಯಾಗಿದ್ದು, ಸಿನಿಮಾದ 11 ದೃಶ್ಯಗಳಿಗೆ ಕತ್ತರಿ ಬಿದ್ದಿದೆ.
ಚಿತ್ರದ ಶೀರ್ಷಿಕೆಯನ್ನು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ನಿರ್ದೇಶನದಂತೆ ಹಮಾರೆ ಬಾರಾ ಎಂದು ಬದಲಾವಣೆ ಮಾಡಿದೆ. ಅಲ್ಲದೇ ಸಿನಿಮಾದ 11 ಸನ್ನಿವೇಶಗಳನ್ನು ಬದಲಾವಣೆ ಮಾಡಿದೆ.
ಹಾಗೂ ರಾಜ್ಯದಲ್ಲಿ ‘ಹಮಾರೆ ಬಾರಾ’ ಚಿತ್ರದ ಬಿಡುಗಡೆ ಅಥವಾ ಪ್ರಸಾರವನ್ನು ಎರಡು ವಾರಗಳವರೆಗೆ ಅಥವಾ ಮುಂದಿನ ಸೂಚನೆ ಬರುವವರೆಗೆ ಕರ್ನಾಟಕ ಸರ್ಕಾರ ನಿಷೇಧಿಸಿದೆ.ಕರ್ನಾಟಕ ಸಿನೆಮಾ ನಿಯಂತ್ರಣ ಕಾಯ್ದೆ 1964, ಸೆಕ್ಷನ್ 15(1) ಮತ್ತು 15(5)ರ ಪ್ರಕಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ‘ಹಮಾರೆ ಬಾರಾ’ ಬಿಡುಗಡೆಯು ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುತ್ತದೆ ಎಂದು ಕರ್ನಾಟಕ ಸರ್ಕಾರ ಆರೋಪಿಸಿದೆ.
ಹಲವಾರು ಅಲ್ಪಸಂಖ್ಯಾತ ಸಂಘಟನೆಗಳು ಮತ್ತು ನಿಯೋಗಗಳ ಮನವಿ ಪರಿಗಣಿಸಿದ ನಂತರ ಮತ್ತು ಟ್ರೈಲರ್ ನೋಡಿದ ನಂತರ ಕರ್ನಾಟಕ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಸಿನಿಮಾದಲ್ಲಿ ಇಸ್ಲಾಂ ಧರ್ಮಕ್ಕೆ ಅವಹೇಳನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂದಿನ ಆದೇಶದವರೆಗೂ ಪ್ರದರ್ಶನಕ್ಕೆ ತಡೆ ನೀಡಿದೆ.