ಬೆಂಗಳೂರು : ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಹಿನ್ನೆಲೆ ಆಗಸ್ಟ್ 01 ರಂದು ನಾಳೆ ರಾಜ್ಯ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ ಆಚರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಏನಿದೆ ಆದೇಶದಲ್ಲಿ..?
ಶ್ರೀ ಮ.ನಿ.ಪ್ರ. ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯನ್ನು ಪ್ರತಿ ವರ್ಷ ಆಗಸ್ಟ್ 01 ರಂದು ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಅನುಬಂಧ. 1ರಲ್ಲಿ ಲಗತ್ತಿಸಿರುವ ಕಾರ್ಯಕ್ರಮಗಳನ್ನೊಳಗೊಂಡು ರಾಜ್ಯ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಆಚರಿಸುವಂತೆ ಹಾಗೂ ಆಯೋಜಿಸುವ ಸಮಾರಂಭದಲ್ಲಿ ಅನುಬಂಧ -2ರಲ್ಲಿ ಲಗತ್ತಿಸಿರುವ ಪ್ರತಿಜ್ಞಾ ವಿಧಿ ಬೋಧಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಮತ್ತು ಸದರಿ ಸಮಾರಂಭವನ್ನು ಆಯೋಜಿಸಲು ತಗುಲುವ ವೆಚ್ಚವನ್ನು ಅನುಬಂಧ -3ರಲ್ಲಿ ಲಗತ್ತಿಸಿರುವಂತೆ ವಿತರಿಸಲು ಸರ್ಕಾರವು ಅನುಮತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಜಿಲ್ಲಾಡಳಿತ ಜಿಲ್ಲಾಪಂಚಾಯತ್, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಧ್ಯಪಾನ, ಮಾದಕದ್ರವ್ಯ, ತಂಬಾಕುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜನ ಜಾಗೃತಿ ಜಾಥಾ ಹಾಗೂ ಸಮಾರಂಭ ಆಯೋಜಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತಜ್ಞರಿಂದ ಭಾಷಣ ಏರ್ಪಡಿಸುವುದು.
ಕಾರ್ಯಕ್ರಮಗಳ ವಿವರ
* ಮಧ್ಯಪಾನದಿಂದ ಉಂಟಾಗುವ ದುಷ್ಪರಿಣಾಮಗಳ ವಿವರ, ಗಣ್ಯರ ಹೇಳಿಕೆ, ಅಂಕಿ ಅಂಶಗಳನ್ನೊಳಗೊಂಡ ಮಾಹಿತಿ ಪತ್ರವನ್ನು ಮುದ್ರಿಸಿ ಜನರಿಗೆ ವಿಶೇಷವಾಗಿ ಯುವಜನರಿಗೆ ಹಂಚುವುದು.
* ಪ್ರತಿ ತಾಲ್ಲೂಕಿನಲ್ಲಿ ಎಲ್ಲಾ ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಪ್ರಭಾತ್ ಪರೇಡನ್ನು ನಡೆಸುವುದು. ಅದಕ್ಕೆ ಸಂಬಂಧಪಟ್ಟ ಭಿತ್ತಿಪತ್ರ ಹಂಚಿ ಪ್ಲೆಕ್ಸ್ಗಳನ್ನು ಹಾಕುವುದು.
* ಶಾಲಾ ಕಾಲೇಜು ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಿವುದು.
* ಸ್ಥಳೀಯ ಪತ್ರಿಕೆಗಳಲ್ಲಿ ಲೇಖನ ಹಾಕಿಸುವುದು.
* ದುಷ್ಪರಿಣಾಮಗಳ ಬಗ್ಗೆ ಫೋಟೊ ಆಲ್ಬಂ ಏರ್ಪಡಿಸುವುದು.
* ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಬೋಧಿಸುವುದು.
* ಮಂಡಳಿಯಿಂದ ಮುದ್ರಿಸಲಾಗಿರುವಡಾ ಮಹಾಂತಸ್ವಾಮಿಗಳ ಜೀವನಚರಿತ್ರೆ ಹಾಗೂ ಸಾಧನೆಗಳ ಕುರಿತು * ಕಿರುಪುಸ್ತಕ ಹಾಗೂಮಡಿಕೆಪತ್ರಗಳನ್ನು ಮಂಡಳಿ ವತಿಯಿಂದ ವಿತರಿಸುವುದು.