ಇತ್ತೀಚೆಗೆ ನಡೆದ ಹರಿಯಾಣ ಹಾಗೂ ಜಮ್ಮು – ಕಾಶ್ಮೀರ ವಿಧಾನಸಭಾ ಚುನಾವಣೆಯ ಫಲಿತಾಂಶ ಮಂಗಳವಾರದಂದು ಹೊರ ಬಿದ್ದಿದ್ದು, ಹರಿಯಾಣದಲ್ಲಿ ಬಿಜೆಪಿ 48 ಸ್ಥಾನಗಳನ್ನು ಗಳಿಸುವ ಮೂಲಕ ನಿಚ್ಚಳ ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರಕ್ಕೆ ಏರಲು ಸಜ್ಜಾಗಿದೆ. ಜಮ್ಮು – ಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಜಯಭೇರಿ ಬಾರಿಸಿದ್ದು, ಓಮರ್ ಅಬ್ದುಲ್ಲಾ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಹರಿಯಾಣದಲ್ಲಿ 48 ಸ್ಥಾನ ಗಳಿಸಿ ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿಗೆ ಈಗ ಪಕ್ಷೇತರರಾಗಿ ಆಯ್ಕೆಯಾಗಿರುವ ಇಬ್ಬರು ಸದಸ್ಯರು ಕೂಡ ಬೆಂಬಲ ಸೂಚಿಸಿದ್ದು, ಹೀಗಾಗಿ ಬಿಜೆಪಿ ಸದಸ್ಯರ ಸಂಖ್ಯೆ 50 ಕ್ಕೆ ಏರಿಕೆಯಾಗಿದೆ. ಹಿಸ್ಸಾರ್ ಕ್ಷೇತ್ರದಿಂದ ಆಯ್ಕೆಯಾಗಿರುವ ದೇಶದ ಅತಿ ಸಿರಿವಂತ ಮಹಿಳೆ ಸಾವಿತ್ರಿ ಜಿಂದಾಲ್ ಹಾಗೂ ಗನೌರ್ ಕ್ಷೇತ್ರದಿಂದ ಚುನಾಯಿತರಾಗಿರುವ ದೇವೇಂದ್ರ ಕಡಿಯಾನ್ ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಈ ಇಬ್ಬರೂ ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದು ಆದರೆ ಅವಕಾಶ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಇನ್ನು ಬಹದ್ದೂರ್ ಗಡ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ದಿನೇಶ್ ಕೌಶಿಕ್ ಅವರನ್ನು ಮಣಿಸಿ ಆಯ್ಕೆಯಾಗಿರುವ ರಾಜೇಶ್ ಜೂನ್ ಕೂಡ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಇದರ ಮಧ್ಯೆ ಹರಿಯಾಣದಲ್ಲಿನ ಸೋಲಿನ ಕುರಿತು ಮೊದಲ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತದಾರರ ತೀರ್ಪನ್ನು ಗೌರವಿಸುತ್ತೇವೆ. ಆದರೆ ಮತ ಎಣಿಕೆಯಲ್ಲಿನ ಲೋಪ ದೋಷಗಳ ಕುರಿತು ನಮ್ಮ ಅಭ್ಯರ್ಥಿಗಳು ನೀಡಿದ ದೂರುಗಳನ್ನು ಪರಿಶೀಲಿಸಿ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.