ಚೆನ್ನೈ : ನಟ ಮತ್ತು ಡಿಎಂಡಿಕೆ ಮುಖ್ಯಸ್ಥ ವಿಜಯಕಾಂತ್ (71) ಗುರುವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕೋವಿಡ್ ಸೋಂಕಿನಿಂದಾಗಿ ವೆಂಟಿಲೇಟರ್ ಬೆಂಬಲದಲ್ಲಿದ್ದರು.
ಕೊರೊನಾ ವೈರಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವಿಜಯಕಾಂತ್ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ನಿಧನರಾದರು.
ಜ್ವರ, ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಅವರನ್ನು ರಾಮಪುರಂನ ಮಿಯಾಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಸಮಯದಲ್ಲಿ, ವಿಜಯಕಾಂತ್ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ವಿಜಯಕಾಂತ್ ಅವರು 154 ಚಲನಚಿತ್ರಗಳಲ್ಲಿ ನಟಿಸಿದ್ದು, ಚಿತ್ರರಂಗದ ಬಳಿಕ ರಾಜಕೀಯಕ್ಕೂ ಪಾದಾರ್ಪಣೆ ಮಾಡಿದ ಅವರು, ವಿರುದಾಚಲಂ ಮತ್ತು ರಿಷಿವಂಡಿಯಂ ಕ್ಷೇತ್ರಗಳನ್ನು ಪ್ರತಿನಿಧಿಸುವ ಮೂಲಕ ಎರಡು ಬಾರಿ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. 2011 ರಿಂದ 2016 ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.