ಬೆಂಗಳೂರು : ‘ಹಿಂದುʼ ಅಶ್ಲೀಲ ಪದ ಎಂದಿದ್ದ ಸತೀಶ್ ಜಾರಕಿಹೊಳಿಗೆ ಸಂಕಷ್ಟ ಎದುರಾಗಿದ್ದು, ಕ್ರಿಮಿನಲ್ ಕೇಸ್ ದಾಖಲಿಸಲು ಜನಪ್ರತಿನಿಧಿಗಳ ಕೋರ್ಟ್ ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿದೆ.
ಸತೀಶ್ ಜಾರಕಿಹೊಳಿ ಹೇಳಿಕೆಗೆ ಬಿಜೆಪಿ ನಾಯಕರು ಹಾಗೂ ಹಿಂದೂ ಕಾರ್ಯಕರ್ತರು, ರಾಜ್ಯದ ಹಲವು ಕಡೆ ಸತೀಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದರು. ವಕೀಲ ದಿಲೀಪ್ ಕುಮಾರ್ ಅವರು ಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯವು ಈಗ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆದೇಶ ನೀಡಿದೆ.
ನಿಪ್ಪಾಣಿಯಲ್ಲಿ ಆಯೋಜಿಸಲಾಗಿದ್ದ ಬುದ್ಧ ಅಂಬೇಡ್ಕರ್ ಸಮಾವೇಶದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಭಾಗಿಯಾಗಿದ್ದರು. ಈ ವೇಳೆ ಅವರು ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಹಿಂದೂ ಎಂಬ ಪದ ಮೂಲತಃ ಭಾರತದ್ದಲ್ಲ, ಅದು ಪರ್ಷಿಯಾದಿಂದ ಬಂದ ಪದ . ಅಸಲಿಗೆ ಹಿಂದೂ ಎಂಬ ಪದಕ್ಕೆ ಪರ್ಷಿಯಾ ಭಾಷೆಯಲ್ಲಿ ಅಶ್ಲೀಲವಾದ ಅರ್ಥಗಳಿವೆ ಎಂದಿದ್ದರು. ಬೇಕಾದರೆ ಯಾರಾದರೂ ಗೂಗಲ್ ನಲ್ಲಿ ಸರ್ಚ್ ಮಾಡಿ ನೋಡಬಹುದು ಅಂತ ಅವರು ಹೇಳಿದ್ದರು.