ಬೆಂಗಳೂರು : ಮಹಿಳೆಯರಿಗೆ 2,000 ರೂ. ನೀಡುವ ಗೃಹಲಕ್ಷ್ಮೀ ಯೋಜನೆ ಜಾರಿಗೆ ರಾಜ್ಯ ಸರ್ಕಾರವು ಕಸರತ್ತು ನಡೆಸಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಸಭೆ ನಡೆಸಲಿದ್ದಾರೆ.
ಇಂದು ವಿಧಾನಸೌಧದಲ್ಲಿ ಬೆಳಗ್ಗೆ 11 ಗಂಟೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಸಭೆ ನಡೆಸಲಿದ್ದು, ಸಭೆಯಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿ ಸಂಬಂಧ ಮಹತ್ವದ ಮಾಹಿತಿ ನೀಡಲಿದ್ದು, ಅರ್ಜಿ ಸಲ್ಲಿಕೆ ಯಾವಾಗ? ಮನೆಯ ಯಜಮಾನಿ ಖಾತೆಗೆ ಯಾವಾಗ ಹಣ ಬಿಡುಗಡೆಯಾಗಲಿದೆ ಎಂಬಿತ್ಯಾದಿ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ನಾಲ್ಕೈದು ದಿನಗಳಲ್ಲಿ ಆ್ಯಪ್ ಬಿಡುಗಡೆ ಮಾಡಿ ಅರ್ಜಿ ಸಲ್ಲಿಕೆ ಯಾವಾಗಿನಿಂದ ಆರಂಭವಾಗಲಿದೆ ಎಂದು ದಿನಾಂಕ ಪ್ರಕಟಿಸಲಾಗುವುದು. ಆಗಸ್ಟ್ 16 ರಂದು ನೇರ ನಗದು ವರ್ಗಾವಣೆ ಮೂಲಕ 2,000 ರೂ. ಗ್ಯಾರಂಟಿ ಹಣ ಸಲ್ಲಿಸಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಅರ್ಜಿ ಸಲ್ಲಿಸಿದ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 16 ರಂದು 2,000 ರೂ. ಹಣ ಪಾವತಿಸುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ ಎಂದರು.