ಬೆಂಗಳೂರು : ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್’ಗೆ ಏಕರೂಪ ದರ ನಿಗದಿ ಮಾಡಲಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸುಳಿವು ನೀಡಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಸಚಿವ ಜಿ.ಪರಮೇಶ್ವರ್ ‘ಚಿತ್ರಮಂದಿರದ ಮಾಲೀಕರೇ ಟಿಕೆಟ್ ದರ ನಿಗದಿ ಮಾಡುವ ಪರಿಸ್ಥಿತಿ ಇದೆ. ಬೇಕಾಬಿಟ್ಟಿಯಾಗಿ ಟಿಕೆಟ್ ದರ ಫಿಕ್ಸ್ ಮಾಡಲಾಗಿದೆ. ಮಲ್ಟಿಫ್ಲೆಕ್ಸ್ ಗಳು ಬೇಕಾಬಿಟ್ಟಿ ವಸೂಲಿ ಮಾಡುತ್ತಿದೆ.
ಕನ್ನಡ ಸಿನಿಮಾಗಳಿಗೆ 100, 200 ರೂ ಇದ್ದರೆ ಪರಭಾಷಾ ಸಿನಿಮಾದ ಟಿಕೆಟ್ ಗೆ 500 ,1000 ಇದೆ.ಚಿತ್ರಮಂದಿರದಲ್ಲಿ ವಾಟರ್ ಬಾಟಲ್ ಕೂಡ ಒಳಗೆ ತರುವಂತಿಲ್ಲ, ಅಲ್ಲದೇ ಥಿಯೇಟರ ನಲ್ಲಿ ವಾಟರ್ ಬಾಟಲ್ ಸೇರಿ ಎಲ್ಲವನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸಿನಿಮಾದ ಟಿಕೆಟ್ ದರಗಿಂತ ಗ್ರಾಹಕರಿಗೆ ನೀರಿನ ಬಾಟಲ್, ತಿನಿಸುಗಳ ದರವೇ ಹೆಚ್ಚಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿನಿಮಾ ಟಿಕೆಟ್’ಗೆ ಏಕರೂಪ ದರ ನಿಗದಿ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ 100 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸ್ಥಗಿತಗೊಂಡಿವೆ. 150 ಚಿತ್ರಮಂದಿರಗಳು ಸ್ಥಗಿತಗೊಳ್ಳುವ ಹಂತದಲ್ಲಿವೆ. ಬೆಂಗಳೂರಿನಲ್ಲಿ 40 ಮಲ್ಟಿಪ್ಲೆಕ್ಸ್ಗಳಿವೆ. ಮುಂದಿನ ದಿನಗಳಲ್ಲಿ ಏಕರೂಪದ ದರ ಪದ್ಧತಿಯನ್ನು ಜಾರಿಗೆ ತರುತ್ತೇವೆ. ದರಗಳನ್ನು ನಿಯಂತ್ರಿಸದಿದ್ದರೆ, ಚಿತ್ರಮಂದಿರ ಮಾಲೀಕರು ಅವರವರ ಇಷ್ಟದಂತೆ ದರ ನಿಗದಿಪಡಿಸುತ್ತಾರೆ ಎಂದರು. ಡಿಸಿಎಂ ಡಿಕೆ ಶಿವಕುಮರ್ ನಟ್ಟು, ಬೋಲ್ಟು ಹೇಳಿಕೆ ಬೆನ್ನಲ್ಲೇ ಸಿನಿಮಾದ ಟಿಕೆಟ್ ದರ ನಿಗದಿ ವಿಚಾರ ಮಹತ್ವ ಪಡೆದುಕೊಂಡಿದೆ.