ಬೆಂಗಳೂರು : ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥಿವ ಶರೀರ ಮಧ್ಯ ರಾತ್ರಿ ಬೆಂಗಳೂರಿಗೆ ಆಗಮಿಸುತ್ತಿದ್ದಂತೆಯೇ ಅವರ ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅವರ ನಿವಾಸಕ್ಕೆ ಗಣ್ಯರು ಹಾಗೂ ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಜಮಾಯಿಸಿದ್ದಾರೆ.
ಇಂದು ಸಂಜೆ 4 ಗಂಟೆಗೆ ಶ್ರೀರಾಮಪುರದ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದು, ಸ್ಪಂದನಾ ತಂದೆ ಬಿ.ಕೆ. ಶಿವರಾಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನದ ಬಳಿಕ ಬಿ,ಕೆ. ಶಿವರಾಂ ಮನೆಯಿಂದ ಅಂತಿಮ ಯಾತ್ರೆ ಆರಂಭವಾಗಲಿದ್ದು, ಬಿಜೆಪಿ ಕಚೇರಿ ಮುಂಭಾಗದ ರಸ್ತೆಯಿಂದ, ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆ ಮೂಲಕ ಪಾರ್ಥಿವ ಶರೀರದ ಮೆರವಣಿಗೆ ಸಾಗಲಿದೆ.
1:30 ಸುಮಾರಿಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸ್ಪಂದನಾ ಅವರ ತಂದೆ ಬಿ.ಕೆ. ಶಿವರಾಂ ನಿವಾಸಕ್ಕೆ ಮೃತದೇಹ ತರಲಾಗಿದ್ದು, ಕುಟುಂಬದವರು ಪೂಜೆ ನೆರವೇರಿಸಿದ್ದಾರೆ. ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕುಟುಂಬದವರು, ಸಂಬಂಧಿಕರು, ಆಪ್ತರು, ಬಿ.ಕೆ. ಶಿವರಾಂ ನಿವಾಸಕ್ಕೆ ಆಗಮಿಸಿ, ಪೂಜೆ ಸಲ್ಲಿಸಿ ದರ್ಶನ ಪಡೆಯಲು ಮುಂದಾಗಿದ್ದಾರೆ. ನಟ ಶಿವರಾಜ್ ಕುಮಾರ್ ದಂಪತಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ವಿಜಯ್ ರಾಘವೇಂದ್ರ, ಶ್ರೀ ಮುರುಳಿ ಸೇರಿದಂತೆ ಕುಟುಂಬದವರು ಪೂಜಾ ಕಾರ್ಯ ನೆರವೇರಿಸಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.