ಉತ್ತರ ಸಿಕ್ಕಿಂ ಜಿಲ್ಲೆಯ ಲೊನಾಕ್ ಸರೋವರದ ಮೇಲೆ ಮೇಘಸ್ಫೋಟದಿಂದ ಮೃತರ ಸಂಖ್ಯೆ 53 ಕ್ಕೆ ಏರಿಕೆಯಾಗಿದೆ . ಮತ್ತು 100 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿಕ್ಕಿಂ ಪ್ರವಾಹದಲ್ಲಿ ಏಳು ಸೈನಿಕರು ಸೇರಿದಂತೆ ಕನಿಷ್ಠ 53 ಜನರು ಸಾವನ್ನಪ್ಪಿದ್ದಾರೆ, ಕಳೆದ ಮೂರು ದಿನಗಳಲ್ಲಿ ನೆರೆಯ ಪಶ್ಚಿಮ ಬಂಗಾಳದ ತೀಸ್ತಾ ನದಿ ಪಾತ್ರದಲ್ಲಿ ಇನ್ನೂ 27 ಶವಗಳು ಪತ್ತೆಯಾಗಿವೆ. ಈ ಪೈಕಿ ಏಳು ಶವಗಳನ್ನು ಗುರುತಿಸಲಾಗಿದೆ.ಮೇಘಸ್ಪೋಟಕ್ಕೆ ಸಿಕ್ಕಿ ನಲುಗಿದ್ದು, ಸೇನೆಯ ಯೋಧರು ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.
140 ಕ್ಕೂ ಹೆಚ್ಚು ಜನರು ಇನ್ನೂ ಕಾಣೆಯಾಗಿದ್ದಾರೆ ಮತ್ತು ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. 1,173 ಮನೆಗಳಿಗೆ ತೀವ್ರ ಹಾನಿಯಾಗಿದ್ದು, 2,413 ಜನರನ್ನು ರಕ್ಷಿಸಲಾಗಿದೆ ಎಂದು ಸಿಕ್ಕಿಂ ಸರ್ಕಾರ ವರದಿ ಮಾಡಿದೆ. ತೀಸ್ತಾ-5 ಜಲವಿದ್ಯುತ್ ಸ್ಥಾವರದ ಕೆಳಭಾಗದ ಎಲ್ಲಾ ಸೇತುವೆಗಳು ಮುಳುಗಿವೆ. ದಿಢೀರ್ ಪ್ರವಾಹವು ತೀಸ್ತಾ ನದಿಯ ಅಬ್ಬರಕ್ಕೆ ಕಾರಣವಾಯಿತು, ಪಟ್ಟಣಗಳು ಮತ್ತು ಹಳ್ಳಿಗಳಲ್ಲಿನ ಹಲವಾರು ಮನೆಗಳು ಮತ್ತು ಸೇನಾ ಸಿಬ್ಬಂದಿ ಸೇರಿದಂತೆ ಡಜನ್ಗಟ್ಟಲೆ ಜನರನ್ನು ಕೊಚ್ಚಿಕೊಂಡು ಹೋಯಿತು.
ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ನಿನ್ನೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ರಕ್ಷಣಾ, ಪರಿಹಾರ ಮತ್ತು ಪುನಃಸ್ಥಾಪನೆ ಕಾರ್ಯತಂತ್ರಗಳನ್ನು ರೂಪಿಸಿದರು. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.