ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡರ ಅಟ್ಟಹಾಸ ಮುಂದುವರೆದಿದ್ದು, ಕರ್ನಾಟಕದ ಮತ್ತೊಂದು ಬಸ್ ಗೆ ಮಸಿ ಬಳಿದು ಧಮ್ಕಿ ಹಾಕಿದ್ದಾರೆ.
ಮಹಾರಾಷ್ಟ್ರದ ಪುಣೆ ನಗರದ ಸ್ವಾರ್ ಗೇಟ್ ಬಳಿ ಶಿವಸೇನೆ ಪುಂಡರು ಪುಂಡಾಟಿಕೆ ಮೆರೆದಿದ್ದಾರೆ. ಬಸ್ ಮೇಲಿದ್ದ ಕನ್ನಡ ಅಕ್ಷರ ಮತ್ತು ನಂಬರ್ ಪ್ಲೇಟ್ಗೆ ಕಪ್ಪು ಮಸಿ ಬಳಿದು ಚಾಲಕನಿಗೆ ಧಮ್ಕಿ ಹಾಕಿದ್ದಾರೆ.
ಮಹಾರಾಷ್ಟ್ರ ಬಸ್ ತಡೆದು ಚಾಲಕನ ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಚಿತ್ರದುರ್ಗ ಜಿಲ್ಲೆ ಐಮಂಗಲ ಠಾಣೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.ಬೆಳಗಾವಿಯಲ್ಲಿ ಮರಾಠಿ ಮಾತಾಡಲು ಬರಲ್ಲ ಎಂದು ಹೇಳಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ಖಂಡಿಸಿ ನವ ನಿರ್ಮಾಣ ಸೇನೆ ಕಾರ್ಯಕರ್ತರು ಶುಕ್ರವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 48ರ ಹಿರಿಯೂರು ತಾಲೂಕು ಗುಯಿಲಾಳ ಟೋಲ್ ನಲ್ಲಿ ಮಹಾರಾಷ್ಟ್ರ ಬಸ್ ತಡೆದು ಚಾಲಕನಿಗೆ ಮಸಿ ಬಳಿದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಐಮಂಗಲ ಠಾಣೆ ಪೊಲೀಸರು ಶನಿವಾರ 10 ಮಂದಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.