ಬೆಂಗಳೂರು : ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಜಾನಿ ಮಾಸ್ಟರ್ ಗೆ 5 ದಿನ ತಾತ್ಕಾಲಿಕ ಜಾಮೀನು ಮಂಜೂರು ಮಾಡಲಾಗಿದೆ.
ಅಕ್ಟೋಬರ್ 06 ರಿಂದ 10ರವರೆಗೆ ಜಾನಿ ಮಾಸ್ಟರ್ಗೆ ಜಾಮೀನು ನೀಡಲಾಗಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ತಮಿಳಿನ ‘ತಿರುಚಿತ್ರಬಲಂ’ ಸಿನಿಮಾದ ಕೊರಿಯೋಗ್ರಫಿಗೆ ಜಾನಿ ಮಾಸ್ಟರ್ಗೆ ರಾಷ್ಟ್ರಪ್ರಶಸ್ತಿ ಬಂದಿದ್ದು, ರಾಷ್ಟ್ರಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಭಾಗಿಯಾಗಲು ಜಾನಿ ಮಾಸ್ಟರ್ಗೆ 5 ದಿನದ ಮಟ್ಟಿಗೆ ಜಾಮೀನು ನೀಡಲಾಗಿದೆ.
ಮಹಿಳೆಯೊಬ್ಬರು ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. ಮಹಿಳೆಯ ದೂರಿನ ಆಧಾರದ ಮೇಲೆ ರಾಯದುರ್ಗಂ ಪೊಲೀಸರು ಪ್ರಕರಣ ದಾಖಲಿಸಿದ್ದರು. ಹೈದರಾಬಾದ್ನ ನರಸಿಂಗಿಯಲ್ಲಿರುವ ಅವರ ನಿವಾಸದಲ್ಲಿ ಮತ್ತು ಹೊರಾಂಗಣ ಚಿತ್ರೀಕರಣಕ್ಕಾಗಿ ಚೆನ್ನೈ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಿಗೆ ಹೋದಾಗ ಜಾನಿ ಮಾಸ್ಟರ್ ತನ್ನ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ ರಾಯದುರ್ಗಂ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಅವರ ವಿರುದ್ಧ ಐಪಿಸಿಯ ಸೆಕ್ಷನ್ 376 (ಅತ್ಯಾಚಾರ), ಕ್ರಿಮಿನಲ್ ಬೆದರಿಕೆ (506) ಮತ್ತು ಕಲಂ (2) ಮತ್ತು (ಎನ್) (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) (323) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ತೆಲುಗಿನ ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಕನ್ನಡ ಸಿನಿಮಾಗಳಲ್ಲೂ ಕೆಲಸ ಮಾಡಿದ್ದಾರೆ.