ಬೆಳಗಾವಿ : ಲೋಕಸಭೆಯಲ್ಲಿ ‘ಭದ್ರತಾ ಲೋಪ’ ನಡೆದು ಆಗಂತುಕರು ಸದನದೊಳಗೆ ನುಗ್ಗಿ ಅವಾಂತರ ಸೃಷ್ಟಿಸಿದ ಹಿನ್ನೆಲೆ ಬೆಳಗಾವಿ ಸುವರ್ಣಸೌಧದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಸ್ಪೀಕರ್ ಯು.ಟಿ ಖಾದರ್ ತುರ್ತುಸಭೆ ಕರೆದಿದ್ದಾರೆ.
ಬೆಳಗಾವಿ ಸುವರ್ಣಸೌಧದಲ್ಲಿ ಸ್ಪೀಕರ್ ಯು.ಟಿ ಖಾದರ್ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಅಪರಿಚಿತ ವ್ಯಕ್ತಿಗಳಿಗೆ ಪ್ರವೇಶಕ್ಕೆ ಅವಕಾಶ ನೀಡಬೇಡಿ, ಚೆಕ್ ಮಾಡಿ ಒಳಗೆ ಬಿಡಿ. ಪಾಸ್ ಇಲ್ಲದವರನ್ನು ಒಳಗೆ ಬಿಡಬೇಡಿ ಎಂದು ಕಟ್ಟು ನಿಟ್ಟಾಗಿ ಸೂಚನೆ ನೀಡಿದರು . ಸುವರ್ಣಸೌಧದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇಬ್ಬರು ಆಗಂತುಕರು ಸಂಸತ್ತಿನ ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಸದಸ್ಯರ ಪೀಠಕ್ಕೆ ಜಿಗಿದು ಹಳದಿ ಬಣ್ಣದ ಆಶ್ರುವಾಯು ಸಿಡಿಸುತ್ತಾ ಓಡಾಡಿದ ಘಟನೆ ಬುಧವಾರ ಲೋಕಸಭೆಯಲ್ಲಿ ನಡೆದಿದೆ, ಪರಿಣಾಮ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳುವಂತೆ ಇಬ್ಬರು ಸಾರ್ವಜನಿಕ ಗ್ಯಾಲರಿಯಿಂದ ಜಿಗಿದಿದ್ದಾರೆ. ಶೂನ್ಯ ವೇಳೆಯಲ್ಲಿ ಒಬ್ಬರು ಅಶ್ರುವಾಯು ಎರಚುತ್ತಾ ಸಾರ್ವಜನಿಕ ಗ್ಯಾಲರಿಯಿಂದ ಜಿಗಿದರೆ ಮತ್ತೊಬ್ಬ ಲೋಕಸಭೆಯ ಬೆಂಚುಗಳ ಮೇಲೆ ಹಾರುತ್ತಿರುವುದು ಕಂಡುಬಂದಿದೆ ಎಂದು ಚೌಧರಿ ಹೇಳಿದರು.