
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಪುಡಿರೌಡಿಗಳ ಅಟ್ಟಹಾಸ ಮಿತಿಮೀರಿದ್ದು, ತಡರಾತ್ರಿ ಲಗ್ಗೆರೆ ಬಳಿ ಕಾರುಗಳ ಗ್ಲಾಸ್ ಒಡೆದು ಪುಂಡಾಟಿಕೆ ಮೆರೆದಿರುವ ಘಟನೆ ನಡೆದಿದೆ.
ಬೆಂಗಳೂರಿನ ಲಗ್ಗೆರೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ 21 ಕಾರುಗಳನ್ನು ಪುಡಿರೌಡಿಗಳು ಧ್ವಂಸ ಮಾಡಿದ್ದಾರೆ. ದೊಣ್ಣೆ, ಲಾಂಗುಗಳಿಂದ ಕಾರುಗಳಿಗೆ ಹಾನಿ ಮಾಡಿರುವ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ರಾಜಗೋಪಾಲನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.