ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ 5 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.
ಇಂದು ಆರೋಪಿಗಳನ್ನು ಮೆಡಿಕಲ್ ಟೆಸ್ಟ್ ಗೆ ಒಳಪಡಿಸಿರುವ ಪೊಲೀಸರು ನಂತರ ಪೊಲೀಸ್ ವಾಹನದ ಮೂಲಕ ಕರೆದುಕೊಂಡು ಹೋಗಿ ಕೋರ್ಟ್ ಗೆ ಹಾಜರುಪಡಿಸಿದರು. ಹೆಚ್ಚಿನ ಪೊಲೀಸ್ ತನಿಖೆಯ ಅಗತ್ಯವಿರುವ ಹಿನ್ನೆಲೆ ಆರೋಪಿಗಳನ್ನು ಇನ್ನಷ್ಟು ದಿನ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಈ ಹಿನ್ನೆಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಗೆ 5 ದಿನ ( ಜೂ.20 ರವರೆಗೆ) ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಪೊಲೀಸರು ತೊಂದರೆ ನೀಡಿದ್ದಾರಾ..? ಎಂದು ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ಆರೋಪಿಗಳು ಇಲ್ಲ ಎಂದು ಹೇಳಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳಿಂದ 10 ಮೊಬೈಲ್ ಸೀಜ್ ಮಾಡಲಾಗಿದೆ. 30 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ, ಮೈಸೂರು, ಬೆಂಗಳೂರಿನ ಸ್ಥಳಗಳಲ್ಲಿ ಮಹಜರು ನಡೆಸಲಾಗಿದೆ ಎಂದು ಸರ್ಕಾರದ ಎಸ್ ಪಿ ಪಿ ಪ್ರಸನ್ನಕುಮಾರ್ ಕೋರ್ಟ್ ಗೆ ಮಾಹಿತಿ ನೀಡಿದರು. ಎ 5 ಆರೋಪಿ ನಂದೀಶ್, ಎ 13 ಆರೋಪಿ ದೀಪಕ್ ಗೆ ಪೊಲೀಸರು ಎಲೆಕ್ಟ್ರಿಕ್ ಶಾಕ್ ನೀಡಿದ್ದಾರೆ ಎಂದು ದರ್ಶನ್ ಪರ ವಕೀಲ ಅನಿಲ್ ಬಾಬು ಸಿ ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ದರ್ಶನ್ ಆಪ್ತೆ, ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ, ಫೋಟೋ ಕಳುಹಿಸಿದ್ದನು ಎನ್ನಲಾಗಿದೆ. ಪವಿತ್ರ ಗೌಡ ಕೂಡ ಈ ವಿಚಾರವನ್ನು ದರ್ಶನ್ ಗಮನಕ್ಕೆ ತಂದಿದ್ದರು . ನಂತರ ಯಾರೋ ಒಬ್ಬರು ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ರಾಘವೇಂದ್ರ ಎಂಬುವವರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ. ನಂತರ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಕಾರ್ ಶೆಡ್ ಒಂದರಲ್ಲಿ ಹಲ್ಲೆ ನಡೆಸಲಾಗಿದೆ. ವೇಳೆ ನಟ ದರ್ಶನ್ ಕೂಡ ಸ್ಥಳದಲ್ಲಿದ್ದರು . ಅವರ ಸೂಚನೆ ಮೇರೆಗೆ ರೇಣುಕಾ ಸ್ವಾಮಿಯನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಿಡಿಆರ್, ಟವರ್ ಡಂಪ್, ಮೊಬೈಲ್ ಸೇರಿ ಸಾಕ್ಷ್ಯಗಳ ಕಲೆ ಹಾಕಿರುವ ಪೊಲೀಸರು ಮಾಹಿತಿ ಆಧರಿಸಿ ಕೊಲೆ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಅನೇಕ ಮಾಹಿತಿಗಳನ್ನು ಕಲೆ ಹಾಕಲಾಗಿದ್ದು, ತನಿಖೆ ಚುರುಕುಗೊಂಡಿದೆ.