ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯನಟ ಚಿಕ್ಕಣ್ಣಗೆ ಸಂಕಷ್ಟ ಎದುರಾಗಿದ್ದು, ನೋಟಿಸ್ ನೀಡಲು ಪೊಲೀಸರು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.
ಹೌದು. ನಟ ದರ್ಶನ್ ಶೆಡ್ ಗೆ ಹೋಗುವ ಮೊದಲು ( ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳ) ದರ್ಶನ್ ಚಿಕ್ಕಣ್ಣ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಕೊಲೆ ನಡೆಯುವದಕ್ಕೂ ಮುನ್ನ ಪಾರ್ಟಿ ಒಂದು ನಡೆದಿದ್ದು, ಈ ಪಾರ್ಟಿಯಲ್ಲಿ ದರ್ಶನ್ ಜೊತೆ ಚಿಕ್ಕಣ್ಣ ಭಾಗಿಯಾಗಿದ್ದರು ಎನ್ನಲಾಗಿದೆ. ಚಿಕ್ಕಣ್ಣಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲದೇ ಇದ್ರೂ ಕೊಲೆ ನಡೆದ ದಿನ ದರ್ಶನ್ ಜೊತೆ ಚಿಕ್ಕಣ್ಣ ಇದ್ದರು ಎಂಬ ಕಾರಣಕ್ಕೆ ನೋಟಿಸ್ ಕೊಡಲು ಪೊಲೀಸರು ಸಿದ್ದತೆ ನಡೆಸಿದ್ದಾರೆ. ಪೊಲೀಸ್ ವಿಚಾರಣೆಗೆ ಹಾಜರಾಗಿ ನಟ ಚಿಕ್ಕಣ್ಣ ಕೂಡ ಹೇಳಿಕೆ ನೀಡುವ ಸಾಧ್ಯತೆಯಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಗ್ಯಾಂಗ್ ನ ಮತ್ತೋರ್ವ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.ರೇಣುಕಾ ಸ್ವಾಮಿ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದ ಆರೋಪಿಗಳು ಚಿತ್ರ ಹಿಂಸೆ ನೀಡಿದ್ದರು. ಬಂಧಿತ 17 ಆರೋಪಿಗಳ ಪೈಕಿ ದೀಪಕ್ ಮತ್ತು ನಂದೀಶ್ ಅವರು ಮೆಗ್ಗರ್ ಸಾಧನ ಬಳಸಿ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಿದ್ದರು.