ಬಜೆಟ್ ಅಧಿವೇಶನಕ್ಕಾಗಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಸಂಸತ್ತಿಗೆ ಆಗಮಿಸಿದ್ದಾರೆ.
ಸಂಸತ್ ನಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಚಂದ್ರಯಾನ-3 ಸಾಧನೆ ಕೊಂಡಾಡಿದ್ದಾರೆ. ಚಂದ್ರದ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿ ಭಾರತ ಮಹತ್ವದ ಸಾಧನೆ ಮಾಡಿದೆ. ಯಾರೂ ನೌಕೆ ಇಳಿಸದ ಜಾಗದಲ್ಲಿ ನೌಕೆಯನ್ನು ಇಳಿಸಿದ್ದಾರೆ. ಈ ಮೂಲಕ ಇಸ್ರೋ ವಿಜ್ಞಾನಿಗಳು ಮಹತ್ವದ ಸಾಧನೆ ಮಾಡಿದ್ದಾರೆ ಎಂದರು.
ನಾವು ಬಾಲ್ಯದಿಂದಲೂ ‘ಗರೀಬಿ ಹಟಾವೋ’ ಘೋಷಣೆಯನ್ನು ಕೇಳಿದ್ದೇವೆ. ಇಂದು, ನಮ್ಮ ಜೀವನದಲ್ಲಿ ಮೊದಲ ಬಾರಿಗೆ, ಬಡತನವನ್ನು ದೊಡ್ಡ ಪ್ರಮಾಣದಲ್ಲಿ ನಿವಾರಿಸುವುದನ್ನು ನಾವು ನೋಡುತ್ತೇವೆ ಎಂದರು.
ಹೊಸ ಸಂಸತ್ ಕಟ್ಟಡದಲ್ಲಿ ನನ್ನ ಮೊದಲ ಭಾಷಣ. ಈ ಭವ್ಯ ಕಟ್ಟಡವನ್ನು ಅಮೃತ ಕಾಲದ ಆರಂಭದಲ್ಲಿ ನಿರ್ಮಿಸಲಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ಸಂಸದೀಯ ಸಂಪ್ರದಾಯಗಳನ್ನು ಗೌರವಿಸುವ ಸಂಕಲ್ಪವನ್ನೂ ಹೊಂದಿದೆ. ಇದಲ್ಲದೆ, 21 ನೇ ಶತಮಾನದ ನವ ಭಾರತದ ಹೊಸ ಸಂಪ್ರದಾಯಗಳನ್ನು ನಿರ್ಮಿಸುವ ಸಂಕಲ್ಪವನ್ನೂ ಹೊಂದಿದೆ. ಈ ಹೊಸ ಕಟ್ಟಡದಲ್ಲಿ ನೀತಿಗಳ ಬಗ್ಗೆ ಅರ್ಥಪೂರ್ಣ ಸಂಭಾಷಣೆ ನಡೆಯಲಿದೆ ಎಂದು ನನಗೆ ವಿಶ್ವಾಸವಿದೆ” ಎಂದು ಹೇಳಿದರು.