ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ನೇ ಆರೋಪಿ ಮೊಹಮದ್ ಷರೀಪ್ ನನ್ನು ಬಂಧಿಸಲಾಗಿದೆ.ಪರಾರಿಯಾಗಿದ್ದ ಷರೀಪ್ ಪತ್ತೆಗೆ ಎನ್ ಐ ಎ ಅಧಿಕಾರಿಗಳು 5 ಲಕ್ಷ ಬಹುಮಾನ ಘೋಷಿಸಿದ್ದರು.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮನೆ ಮೇಲೆ ಇತ್ತೀಚೆಗೆ ಎನ್ ಐ ಎ (NIA) ದಾಳಿ ನಡೆಸಿತ್ತು. ಕರ್ನಾಟಕದ 16 ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು . ಎನ್ಐಎ ಆಗಸ್ಟ್ 4, 2022 ರಂದು ಸ್ಥಳೀಯ ಪೊಲೀಸರಿಂದ ತನಿಖೆಯನ್ನು ವಹಿಸಿಕೊಂಡಿತ್ತು ಮತ್ತು ಜನವರಿ 2023 ರಲ್ಲಿ 21 ಆರೋಪಿಗಳ ವಿರುದ್ಧ ಚಾರ್ಜ್’ಶೀಟ್ ಸಲ್ಲಿಸಿತ್ತು.
ಏನಿದು ಪ್ರಕರಣ ?
ಪ್ರವೀಣ್ ನೆಟ್ಟಾರು, ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಅಕ್ಷಯ ಫ್ರೆಶ್ ಚಿಕನ್ ಫಾರ್ಮ್ ಶಾಪ್ ಹೊಂದಿದ್ದು, 2022ರ ಜುಲೈ 26ರಂದು ರಾತ್ರಿ 8.30 ರ ಸುಮಾರಿಗೆ ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿದ್ದರು. ಮೊದಲಿಗೆ ಬೆಳ್ಳಾರೆ ಪೊಲೀಸರು ತನಿಖೆ ನಡೆಸುತ್ತಿದ್ದ ಈ ಪ್ರಕರಣವನ್ನು ಬಳಿಕ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಗೆ ವಹಿಸಲಾಗಿತ್ತು.