ನವದೆಹಲಿ : ದೆಹಲಿಯಲ್ಲಿ ರಾಜಕೀಯ ಕಸರತ್ತು ಗರಿಗೆದರಿದ್ದು, ಇಂದು ಸಂಜೆ 4:30 ಕ್ಕೆ ಎನ್ ಡಿ ಎ ಮೈತ್ರಿಕೂಟಗಳ ಸಭೆ ನಿಗದಿಯಾಗಿದೆ.
ಲೋಕಸಭಾ ಚುನಾವಣೆ 2024 ರ ಫಲಿತಾಂಶದ ಒಂದು ದಿನದ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಇಂದು ದೆಹಲಿಯಲ್ಲಿ ಸಭೆ ಸೇರಲಿದೆ. ಈ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಎನ್ಡಿಎ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿದೆ. ಸ್ಪೀಕರ್, ಸಚಿವ ಸ್ಥಾನ ನೀಡುವಂತೆ ಮೈತ್ರಿಕೂಟಗಳು ಪಟ್ಟು ಹಿಡಿಯುವ ಸಾಧ್ಯತೆಯಿದೆ.
ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಬಿಜೆಪಿ ಎರಡೂ ಬಿಹಾರದಲ್ಲಿ 12 ಸ್ಥಾನಗಳನ್ನು ಗೆದ್ದಿವೆ. ಇದಲ್ಲದೆ, ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ತಮ್ಮ ಪಕ್ಷವು ಈ ಸಭೆಯಲ್ಲಿ ಭಾಗವಹಿಸಲಿದೆ ಎಂದು ಹೇಳಿದರು. ತಮ್ಮ ಪಕ್ಷವು ಎನ್ಡಿಎಯನ್ನು ದೃಢವಾಗಿ ಬೆಂಬಲಿಸುತ್ತದೆ ಎಂದು ಹೇಳಿದ ಪಾಸ್ವಾನ್, ಪ್ರಧಾನಿ ಮೋದಿಯವರ ಅಡಿಯಲ್ಲಿ ಮೂರನೇ ಅವಧಿಯು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತದೆ ಎಂದು ಹೇಳಿದರು.