ಅಬುಧಾಬಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಬುಧಾಬಿಯಲ್ಲಿ ಯುಎಇಯ ಐತಿಹಾಸಿಕ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರವನ್ನು ಉದ್ಘಾಟಿಸಿದ್ದಾರೆ.
ಇಂದು ಸಂಜೆ ಪ್ರಧಾನಿ ಮೋದಿ ಅವರು ಅಬುಧಾಬಿಯ ಸ್ವಾಮಿ ನಾರಾಯಣ ದೇಗುಲವನ್ನು ಉದ್ಘಾಟಿಸಿದ್ದಾರೆ. ಯುಎಇಯ ಬಿಎಪಿಎಸ್ ಸ್ವಾಮಿ ನಾರಾಯಣ ಸಂಸ್ಥೆ ಅಬುಧಾಬಿಯಲ್ಲಿ 27 ಎಕರೆ ಪ್ರದೇಶದಲ್ಲಿ ಬೃಹತ್ ಹಿಂದೂ ದೇವಸ್ಥಾನವೊಂದನ್ನು ನಿರ್ಮಿಸಿದೆ. ಇಲ್ಲಿ ಕೃಷ್ಣ-ರಾಧೆ, ಶಿವ- ಪಾರ್ವತಿ ಮತ್ತು ರಾಮ-ಸೀತೆ, ಲಕ್ಷ್ಮಣ ಹಾಗೂ ಹನುಮಂತ ಸೇರಿ ಬಹುತೇಕ ಎಲ್ಲ ಹಿಂದೂ ದೇವರರನ್ನ ಪೂಜಿಸಲಾಗುತ್ತದೆ. ಮಂದಿರವು 108 ಅಡಿ ಎತ್ತರ, 262 ಅಡಿ ಉದ್ದ, 180 ಅಡಿ ಅಗಲವಿದೆ.
ಏಳು ಗೋಪುರಗಳಿಂದ ಅಲಂಕರಿಸಲ್ಪಟ್ಟ ಈ ಮಂದಿರವು ಏಳು ಎಮಿರೇಟ್ಗಳ ಏಕತೆಗೆ ಕೃತಜ್ಞತೆಯನ್ನು ಸಂಕೇತಿಸುತ್ತದೆ, ಇದು ಭಾರತ ಮತ್ತು ಯುಎಇ ನಡುವಿನ ಸಾಮರಸ್ಯದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಏಳು ಗೋಪುರಗಳು ಏಳು ಪ್ರಮುಖ ದೇವತೆಗಳಿಗೆ ಗೌರವ ಸಲ್ಲಿಸುತ್ತವೆ, ಇದು ಸಂಸ್ಕೃತಿಗಳು ಮತ್ತು ಧರ್ಮಗಳ ಪರಸ್ಪರ ಸಂಬಂಧವನ್ನು ಒತ್ತಿಹೇಳುತ್ತದೆ.