ಮೆಕ್ಸಿಕೊ ಸಿಟಿ: ಮೆಕ್ಸಿಕೋದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ, ಉತ್ತರ ಮೆಕ್ಸಿಕೊದ ಕೊಹುಯಿಲಾ ರಾಜ್ಯದ ರಾಮೋಸ್ ಅರಿಜ್ಪೆ ನಗರದಲ್ಲಿ ವಿಮಾನ ಅಪಘಾತ ಸಂಭವಿಸಿದೆ.
ಸ್ಥಳೀಯ ನಾಗರಿಕ ವಿಮಾನಯಾನ ಅಧಿಕಾರಿಗಳು ಈ ಘಟನೆಯನ್ನು ದೃಢಪಡಿಸಿದ್ದು, ಸಾಲ್ಟಿಲೋ ವಿಮಾನ ನಿಲ್ದಾಣದ ಬಳಿ ಲಘು ವಿಮಾನ ಅಪಘಾತಕ್ಕೀಡಾದ ಪರಿಣಾಮ ಪೈಲಟ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ವಿಮಾನದ ಇಂಧನ ಖಾಲಿಯಾಗಿತ್ತು, ನಂತರ ಅದು ರನ್ವೇಯಿಂದ ಕೇವಲ 200 ಮೀಟರ್ ದೂರದಲ್ಲಿ ಅಪಘಾತಕ್ಕೀಡಾಗಿದೆ ಎಂದು ಹೇಳಲಾಗುತ್ತಿದೆ.
ಪೈಪರ್ ಪಿಎ -46 ವಿಮಾನವು ಒಟ್ಟು ನಾಲ್ಕು ಜನರನ್ನು ಹೊತ್ತೊಯ್ಯುತ್ತಿತ್ತು ಮತ್ತು ಉತ್ತರ ಮೆಕ್ಸಿಕನ್ ಗಡಿ ಪಟ್ಟಣ ಮಟಾಮೊರೊಸ್, ತಮೌಲಿಪಾಸ್ನಿಂದ ಕೊಹುಯಿಲಾಗೆ ಹಾರುತ್ತಿತ್ತು. ಸ್ಥಳೀಯ ಅಧಿಕಾರಿಗಳ ಪ್ರಕಾರ, ಮಧ್ಯಾಹ್ನದ ನಂತರ ವಿಮಾನದ ಪೈಲಟ್ ಲ್ಯಾಂಡಿಂಗ್ಗಾಗಿ ರಾಮೋಸ್ ಅರಿಜ್ಪೆ ವಿಮಾನ ನಿಲ್ದಾಣದಿಂದ ಸಹಾಯವನ್ನು ಕೇಳಿದಾಗ ಅಪಘಾತ ಸಂಭವಿಸಿದೆ. ನಂತರ ವಿಮಾನವು ಸಾಲ್ಟಿಲೋ ವಿಮಾನ ನಿಲ್ದಾಣದ ರನ್ವೇ ಬಳಿ ಸುಮಾರು 200 ಮೀಟರ್ ಎತ್ತರದಿಂದ ಬಿದ್ದಿತು. ಅಪಘಾತಕ್ಕೆ ಸ್ವಲ್ಪ ಮೊದಲು, ಪೈಲಟ್ ತನ್ನ ವಿಮಾನದಲ್ಲಿ ಇಂಧನ ಮುಗಿದಿದೆ ಎಂದು ಹೇಳಿದ್ದರು ಎಂದು ಹೇಳಲಾಗುತ್ತಿದೆ.