ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಮಾಡಿದ್ದೇವೆ. ರಾಜ್ಯಪಾಲರು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವಕ್ಕೆ ಮಾರಕವಾದ ಪತ್ರ ಕಳುಹಿಸಿದ್ದಾರೆ. ರಾಜ್ಯಪಾಲರ 26.7.2024ರ ನೋಟಿಸ್ ಸಂಬಂಧ ಏಪ್ರಿಲ್ 1ರಂದು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದೇವೆ. ಆ ದೂರಿನಲ್ಲಿ ತಿರುಳು ಇಲ್ಲ. ಸಂವಿಧಾನದ ಅಂಶಗಳನ್ನು ತಿಳಿ ತಿಳಿಯಾಗಿ ಹೇಳಿದ್ದೇವೆ. ಇದು ರಾಜಕೀಯ ಪಿತೂರಿ. ಮುಡಾ ಪ್ರಕರಣದಲ್ಲಿ ಯಾವುದೇ ಲೋಪದೋಷ ಆಗಿಲ್ಲ ಎಂದು ರಾಜ್ಯಪಾಲರಿಗೆ ತಿಳಿಸಿದ್ದೇವೆ.
ಸರ್ಕಾರ ರಾಜ್ಯಪಾಲರ ಕೈ ಕೆಳಗೆ ಕೆಲಸ ಮಾಡುತ್ತದೆ. ಸಂವಿಧಾನದ ಮೌಲ್ಯ ಎತ್ತಿ ಹಿಡಿಯಬೇಕು ಎಂದು ನಾವು ಕೆಲಸ ಮಾಡುತ್ತಿದ್ದೇವೆ. ಇಂದು ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಪತ್ರ ಕಳುಹಿಸಿದ್ದಾರೆ. ಪ್ರಾಸಿಕ್ಯೂಷನ್ಗೆ ಅನುಮತಿ ಕೊಡಬೇಕಾದರೆ ಪ್ರಕರಣದ ಸಂಬಂಧ ತನಿಖೆ ನಡೆಸಿ, ತನಿಖೆಯ ರಿಪೋರ್ಟ್ ಬಂದಿದ್ದರೆ ಅನುಮತಿ ನೀಡಬಹುದಾಗಿತ್ತು.
ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಲೋಕಾಯುಕ್ತದಲ್ಲಿ ತನಿಖೆ ನಡೆದಿದೆ. ಅವರ ವಿರುದ್ಧ ಲೋಕಾಯುಕ್ತ, ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಅನುಮತಿ ಕೋರಿ ಮನವಿ ಮಾಡಿದ್ದಾರೆ. ಅಕ್ರಮ ಗಣಿಗಾರಿಕೆ ಸಂಬಂಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ಮನವಿ ಸಲ್ಲಿಸಿದ್ದರು. ಜನಾರ್ದನ ರೆಡ್ಡಿ, ಜೊಲ್ಲೆ, ನಿರಾಣಿ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಲಾಗಿತ್ತು. ಅದರ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಆದರೆ ಈ ಪ್ರಕರಣದಲ್ಲಿ ದೂರು ಬಂದ ಒಂದೇ ದಿನದಲ್ಲಿ ರಾಜ್ಯಪಾಲರು ನೋಟಿಸ್ ಕಳುಹಿಸಿದ್ದಾರೆ.
ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 136 ಶಾಸಕರ ಬಲದ ಮತ್ತು ರಾಜ್ಯದ ಜನರ ವಿರುದ್ಧದ ತೀರ್ಮಾನವಾಗಿದೆ.
ರಾಜ್ಯಪಾಲರ ಕಚೇರಿ ದುರ್ಬಳಕೆ ಮಾಡುತ್ತಿದ್ದಾರೆ. ಜೋಶಿ, ಕುಮಾರಸ್ವಾಮಿ ಈ ಸರ್ಕಾರ ಬೀಳಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಈ ಪೂರ್ವಾನುಮತಿ ನೀಡಲಾಗಿದೆ. ಇಡೀ ಸಂಪುಟ ಸಚಿವರು ಸಿಎಂ ಬೆನ್ನಿಗೆ ನಿಂತಿದ್ದಾರೆ. ಪಕ್ಷವೂ ಸಿಎಂ ಬೆನ್ನಿಗೆ ನಿಂತಿದೆ. ಯಾವುದೇ ಪ್ರಕರಣ ಇಲ್ಲ. ಅದರೂ ಸಿಎಂ ಮೇಲೆ ಕೇಸ್ ಮಾಡಿದ್ದಾರೆ. ಕಾನೂನು ರೀತಿಯ ಹೋರಾಟ ಮಾಡುತ್ತೇವೆ. ರಾಜಕೀಯವಾಗಿಯೂ ಹೋರಾಟ ಮಾಡುತ್ತೇವೆ. ಈ ಪ್ರಾಸಿಕ್ಯೂಷನ್ ಕಾನೂನಿಗೆ ವಿರುದ್ಧವಾಗಿದೆ ಎಂದು ಹೇಳಿದರು.