ಬೆಂಗಳೂರು : ರಾಜ್ಯದಲ್ಲಿ ವರುಣಾರ್ಭಟ ಮುಂದುವರೆದಿದ್ದು, ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರಕ್ಕೆ ಈವರೆಗೆ 16 ಮಂದಿ ಸಾವನ್ನಪ್ಪಿದ್ದು, ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ತಾಯಿ ಹಳ್ಳದಲ್ಲಿ ಬಿದ್ದು ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹೊಸಸಿದ್ರಳ್ಳಿಯಲ್ಲಿ ಅಡಿಕೆ ತೋಟ ಮುಳಗಡೆಯಾಗಿದ್ದನ್ನು ನೋಡಲು ಹೋಗಿದ್ದ ರಾಮಮ್ಮ ಎಂಬ ವೃದ್ಧೆ ಕಾಲು ಜಾರಿ ತಾಯಿಹಳ್ಳದಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಡಿಎಂ ಕುರ್ಕೆ ಗ್ರಾಮದಲ್ಲಿ ರಾತ್ರಿ ಅಡುಗೆ ಮಾಡುತ್ತಿರುವಾಗಲೇ ಮನೆ ಗೋಡೆ ಕುಸಿದು ಗೌರಮ್ಮ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮಳೆಗೆ ಈವರೆಗೆ ಮೃತಪಟ್ಟವರ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಮಳೆ ಸಂಬಂಧಿ ಅವಘಡಗಳಲ್ಲಿ ನಿನ್ನೆ ಐವರು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಪುರ ತಾಲೂಕಿನ ತಿವೋಳಿವಾಡದಲ್ಲಿ ಹೊಲ ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಪಾಂಡುರಂಗ ಲಾಟಗಾವಂಕರ (61) ಮೃತಪಟ್ಟಿದ್ದಾರೆ, ದಾವಣಗೆರೆ ಜಿಲ್ಲೆಯ ಹರಿಹಾರ ತಾಲೂಕಿನ ಕುಂಬಳೂರಿನಲ್ಲಿ ಮನೆಯ ಗೋಡೆ ಕುಸಿದು 1.5 ವರ್ಷದ ಹೆಣ್ಣು ಮಗು ಸ್ಪೂರ್ತಿ ಮೃತಪಟ್ಟಿದ್ದಾಳೆ.ವಿಜಯಪುರದಲ್ಲಿ ಮನೆಯ ಚಾವಣಿ ಕುಸಿದು ಕನ್ನೂರು ಗ್ರಾಮದಲ್ಲಿ ಶಿವಮ್ಮ ನೂಒಂದಪ್ಪ ಸಾವಳಗಿ (60) ಎಂಬುವರು ಸಾವನ್ನಪ್ಪಿದ್ದಾರೆ. ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ದನ್ನೂರಿನಲ್ಲಿ ಹಳ್ಳ ದಾಟುವಾಗ ಕೆಳಗೆ ಬಿದ್ದು ಮಲ್ಲಪ್ಪ ಎಂಬುವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.