ಪುಣೆ: ವಿದ್ಯುತ್ ಪರಿವರ್ತಕ ಸ್ಫೋಟಗೊಂಡ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿರುವ ಘಟನೆ ಪುಣೆಯ ಅಲಂಡಿ ಬಳಿಯ ಶೆಲು ಗ್ರಾಮದಲ್ಲಿ ಇಂದು ನಡೆದಿದೆ.
ಪಾಳುಬಿದ್ದ ಕೈಗಾರಿಕಾ ಘಟಕದ ಪಕ್ಕದಲ್ಲಿದ್ದ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ಫೋಟದಿಂದಾಗಿ ಬೆಂಕಿಯು ಹತ್ತಿರದ ಪ್ರದೇಶಕ್ಕೆ ಹರಡಿದೆ ಮತ್ತು ಅದರ ಸುತ್ತಲಿನ ರಚನೆಗಳು ಭಾರಿ ಹಾನಿಗೊಳಗಾಗಿವೆ. ಘಟನೆಯಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಸೂಚಿಸುತ್ತದೆ. ಅವರಲ್ಲಿ ಒಬ್ಬರು ಗಾಯಗಳಿಗೆ ಬಲಿಯಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸ್ ತಂಡಗಳು ಸ್ಥಳದಲ್ಲಿದ್ದು, ಪರಿಸ್ಥಿತಿಗೆ ಸ್ಪಂದಿಸುತ್ತಿವೆ ಎಂದು ಡಿಸಿಪಿ ಶಿವಾಜಿ ಪವಾರ್ ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ನಿಗಮ ನಿಯಮಿತದ (ಎಂಎಸ್ಇಡಿಸಿಎಲ್) ಟ್ರಾನ್ಸ್ಫಾರ್ಮರ್ ವಸತಿ ಪ್ರದೇಶದಲ್ಲಿದೆ. ಹತ್ತಿರದ ಮನೆಯೊಂದರ ಒಳಗೆ ಫೈರ್ ಬಾಲ್ ಬಿದ್ದು, ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡಿದೆ. ನಂತರ ಬೆಂಕಿ ಬಹಳ ಬೇಗ ಹರಡಿತು ಮತ್ತು ಹೆಚ್ಚಿನ ಹಾನಿಗೆ ಕಾರಣವಾಯಿತು’ ಎಂದು ಅಗ್ನಿಶಾಮಕ ಅಧಿಕಾರಿ ಹೇಳಿದರು.