ಬೆಂಗಳೂರು : ನಾನು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಚಿವ ಬಿ.ನಾಗೇಂದ್ರ ಘೋಷಣೆ ಮಾಡಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಲು ನನಗೆ ಯಾರೂ ಕೂಡ ಒತ್ತಡ ಹಾಕಿಲ್ಲ, ನಾನು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುತ್ತಿದ್ದೇನೆ. ಸಂಜೆ 7:30 ಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
ಪಕ್ಷ, ಸರ್ಕಾರಕ್ಕೆ ಮುಜುಗರವಾಗದಂತೆ ಈ ನಿರ್ಧಾರ ಕೈಗೊಂಡಿದ್ದೇನೆ. ಪ್ರಕರಣದ ಬಗ್ಗೆ ತನಿಖೆ ನಡೆಯಲಿದೆ ಎಂದು ಹೇಳಿದರು.
ಏನಿದು ಪ್ರಕರಣ..?
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯೊಬ್ಬರು 6 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ವಿನೋಬ ನಗರದ ಕೆಂಚಪ್ಪ ಲೇಔಟ್ ನಲ್ಲಿ ನಡೆದಿತ್ತು. ನಿಗಮದ ಸೂಪರಿಂಟೆಂಡೆಂಟ್ ಚಂದ್ರಶೇಖರ್ (52) ಆತ್ಮಹತ್ಯೆ ಮಾಡಿಕೊಂಡವರು. ವಾಲ್ಮೀಕಿ ನಿಗಮದಲ್ಲಿ ನಡೆದಿದ್ದ 187 ಕೋಟಿ ಹಗರಣಕ್ಕೆ ಬೇಸತ್ತು, ತನ್ನ ಸಾವಿಗೆ ಅಧಿಕಾರಿಗಳೇ ಕಾರಣ ಎಂದು ಕೆಲ ಅಧಿಕಾರಿಗಳ ಹೆಸರು ಬರೆದಿಟ್ಟು ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ಬಿ ನಾಗೇಂದ್ರ ಭಾಗಿಯಾಗಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿದ್ದು, ತನಿಖೆಯಿಂದಲೇ ಸತ್ಯಾನುಸತ್ಯತೆ ಹೊರಬರಬೇಕಿದೆ.