16 ಕೆರೆಗಳನ್ನು ನಿರ್ಮಿಸುವ ಮೂಲಕ ದೇಶದ ಗಮನ ಸೆಳೆದಿದ್ದ ಹಾಗೂ ಈ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿಯವರ ಶ್ಲಾಘನೆಗೆ ಪಾತ್ರರಾಗಿದ್ದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡ ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ 86 ವರ್ಷದ ಕಾಮೇಗೌಡ ಇಂದು ಮುಂಜಾನೆ ವಿಧಿವಶರಾಗಿದ್ದು, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಾಮೇಗೌಡರ ಸಾಮಾಜಿಕ ಕಾರ್ಯ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿದ್ದವು.
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಕಾಮೇಗೌಡರ ಕಾರ್ಯವನ್ನು ಶ್ಲಾಘಿಸಿದ್ದರಲ್ಲದೆ ಅವರನ್ನು ಆಧುನಿಕ ಭಗೀರಥ ಎಂದು ಕರೆದಿದ್ದರು. ನರೇಂದ್ರ ಮೋದಿಯವರು ಯೋಗ ದಿನಕ್ಕಾಗಿ ಮೈಸೂರಿಗೆ ಬಂದ ಸಂದರ್ಭದಲ್ಲಿ ಕಾಮೆಗೌಡರು ಅವರನ್ನು ಭೇಟಿಯಾಗುವ ಇಚ್ಚೆ ವ್ಯಕ್ತಪಡಿಸಿದ್ದು, ಆದರೆ ಅನಾರೋಗ್ಯದ ಕಾರಣಕ್ಕೆ ಇದು ಸಾಧ್ಯವಾಗಿರಲಿಲ್ಲ.