ಮಹತ್ವದ ಬೆಳವಣಿಗೆಯೊಂದರಲ್ಲಿ ಅದಾನಿ ಸಮೂಹದ ಕುರಿತು ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ವರದಿ ಹಿನ್ನೆಲೆಯಲ್ಲಿ ಸೆಬಿ ನಿಯಮಗಳನ್ನು ಉಲ್ಲಂಘಿಸಲಾಗಿದೆಯಾ ಎಂಬುದರ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸೂಚಿಸಿದೆ.
‘ಸೆಬಿ’ ಗೆ ಈ ಕುರಿತಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು, ಸ್ಟಾಕ್ ಮಾರ್ಕೆಟ್ ನಲ್ಲಿ ಷೇರುಗಳ ಬೆಲೆಯಲ್ಲಿ ವ್ಯತ್ಯಾಸ ಮಾಡಲಾಗಿದೆಯಾ ಎಂಬುದರ ಕುರಿತು ತನಿಖೆ ನಡೆಸಿ ಎರಡು ತಿಂಗಳೊಳಗೆ ವರದಿ ನೀಡಬೇಕಿದೆ.
ಹಿಂಡನ್ ಬರ್ಗ್ ವರದಿ ಬಳಿಕ ಅದಾನಿ ಸಮೂಹದ ಷೇರುಗಳ ಬೆಲೆಯಲ್ಲಿ ತೀವ್ರ ಕುಸಿತ ಕಾಣುತ್ತಿದ್ದು, ಹೀಗಾಗಿ ಭಾರತದ ಅತಿ ಸಿರಿವಂತ ಹಾಗೂ ವಿಶ್ವ ಸಿರಿವಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಸಂಪತ್ತಿನಲ್ಲೂ ಭಾರಿ ಇಳಿಕೆಯಾಗಿತ್ತು.
ಗೌತಮ್ ಅದಾನಿ ಈಗ ವಿಶ್ವ ಸಿರಿವಂತರ ಪಟ್ಟಿಯಲ್ಲಿ 32 ನೇ ಸ್ಥಾನಕ್ಕೆ ಕುಸಿದಿದ್ದು, ಅಲ್ಲದೆ ಅದಾನಿ ಸಮೂಹದಲ್ಲಿ ಎಲ್ಐಸಿ ಹೂಡಿಕೆ ಮಾಡಿದ್ದು ಆಕ್ಷೇಪಕ್ಕೆ ಕಾರಣವಾಗಿತ್ತು.
ಹೀಗಾಗಿ ಎಲ್ಲ ವಿಷಯಗಳ ಮೇಲ್ವಿಚಾರಣೆಗೆ ನಿವೃತ್ತ ನ್ಯಾಯಮೂರ್ತಿ ಎ.ಎಂ. ಸಪ್ರೆ ನೇತೃತ್ವದಲ್ಲಿ ಸಮಿತಿ ಒಂದನ್ನೂ ಸಹ ಸುಪ್ರೀಂ ಕೋರ್ಟ್ ರಚಿಸಿದೆ.