ಬೆಂಗಳೂರು: ಸಾರಿಗೆ ನೌಕರರ ಜೊತೆ ಸರ್ಕಾರ ನಡೆಸಿರುವ ಸಂಧಾನ ಸಭೆ ಯಶಸ್ವಿಯಾಗಿದ್ದು, ಮುಷ್ಕರ ನಿರತ ನೌಕರರನ್ನು ಮನವೊಲಿಸುವಲ್ಲಿ ಸರ್ಕಾರ ಸಫಲವಾಗಿದೆ.
ಸಾರಿಗೆ ನಿಗಮದ ಯೂನಿಯನ್ ಮುಖಂಡರ ಜೊತೆ ಸಾರಿಗೆ ಸಚಿವ ಲಕ್ಷ್ಮಣ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ಸಾರಿಗೆ ನೌಕರರು ಮುಷ್ಕರ ವಾಪಸ್ ಪಡೆದು ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಬಸ್ ಸಂಚಾರ ಆರಂಭವಾಗಲಿದೆ.
ಸಾರಿಗೆ ನೌಕರರು ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿದ್ದರು. ಹಲವು ಬಾರಿ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ನಡೆದ ಸಭೆ ವಿಫಲವಾಗಿತ್ತು. ಇದರ ಬೆನ್ನಲ್ಲೇ ಸಾರಿಗೆ ನೌಕರರು ಇಂದಿನಿಂದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಅಂತಿಮವಾಗಿ ಸಾರಿಗೆ ಯೂನಿಯನ್ ಮುಂಡರು ಹಾಗೂ ಸರ್ಕಾರದ ನಡುವೆ ನಡೆದ ಸಭೆಯಲ್ಲಿ ಮುಷ್ಕರ ನಿರತ ನೌಕರರನ್ನು ಮನವೊಲಿಸಲಾಗಿದ್ದು, ಸಮಿತಿಯೊಂದನ್ನು ರಚಿಸಿ ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ತಿಳಿದುಬಂದಿದೆ.