ಬೆಂಗಳೂರು: ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಆಡಳಿತಾರೂಢ ಬಿಜೆಪಿ ಸರ್ಕಾರದ ಕೊನೆ ಅಧಿವೇಶನ ಇದಾಗಿದೆ. ಈ ಜನವರಿವರೆಗೆ ರಾಜಸ್ವ ಸಂಗ್ರಹಣೆ ಶೇ.91ರಷ್ಟು ಗುರಿ ಸಾಧಿಸಲಾಗಿದೆ. ಜನವರಿವರೆಗೆ ಪ್ರಸಕ್ತ ಬಜೆಟ್ ನ ಶೇ.75ರಷ್ಟು ವೆಚ್ಚ ಮಾಡಲಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.
ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ, ಸರ್ಕಾರದ ಸಾಧನೆಯನ್ನು ವಿವರಿಸಿದ ರಾಜ್ಯಪಾಲರು, ರಾಜ್ಯದಲ್ಲಿ ಜಾನುವಾರುಗಳ ಚರ್ಮಗಂಟು ರೋಗ ತಡೆಯಲು 1 ಕೋಟಿಗೂ ಹೆಚ್ಚು ಜಾನುವಾರಿಗಳಿಗೆ ಲಸಿಕೆ ಹಾಕಲಾಗಿದೆ. ಮತ್ಸ್ಯ ಸಂಪದ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಅತ್ಯಾಚಾರ, ಪೋಕ್ಸೋ ಪ್ರಕರಣಗಳ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪಿಸಲಾಗಿದೆ ಎಂದರು.
2022-23ನೇ ಸಾಲಿನಲ್ಲಿ 15,066 ಕೊಟಿ ಅಲ್ಪಾವಧಿ ಬೆಳೆ ಸಾಲ ನೀಡಲಾಗಿದೆ. 20.19 ಲಕ್ಷ ಕೋಟಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ನೀಡಲಾಗಿದೆ. ಗೋವುಗಳ ರಕ್ಷಣೆಗಾಗಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಪುಣ್ಯಕೋಟಿ ಯೋಜನೆಯಡಿ 100 ಗೋ ಶಾಲೆಗಳ ನಿರ್ಮಾಣ ಮಾಡಲಾಗಿದ್ದು, ಈ ಮೂಲಕ ಯೋಜನೆ ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕ ಎಂಬ ಕೀರ್ತಿಗೆ ಪಾತ್ರವಾಗಿದೆ.