ರಾಜ ಕಾಲುವೆ ಒತ್ತುವರಿ ಮಾಡಿಕೊಂಡು ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿಕೊಂಡಿರುವ ಪ್ರಭಾವಿಗಳ ಎದೆಯಲ್ಲಿ ಈಗ ಢವಢವ ಶುರುವಾಗಿದೆ. ಸೋಮವಾರದಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿರುವ ಬಿಬಿಎಂಪಿ ಇಂದು ಕೂಡಾ ಅದನ್ನು ಮುಂದುವರಿಸಿದ್ದು, ಯಾವುದೇ ಪ್ರಭಾವಕ್ಕೆ ಮಣಿಯುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿರುವ ಹಿನ್ನೆಲೆಯಲ್ಲಿ ದೊಡ್ಡ ಕಟ್ಟಡಗಳಿಗೆ ಕಂಟಕ ಕಾಡಲಿದೆಯಾ ಎಂಬ ಕುತೂಹಲ ಮನೆ ಮಾಡಿದೆ.
ಈ ಹಿಂದೆಯೂ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿತ್ತಾದರೂ ಕೇವಲ ಜನಸಾಮಾನ್ಯರ ಕಟ್ಟಡಗಳನ್ನು ಕೆಡವಿ ಪ್ರಭಾವಿಗಳಿಗೆ ಸೇರಿದ ಆಸ್ತಿಗಳನ್ನು ಬಿಬಿಎಂಪಿ ಮುಟ್ಟಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ನಂತರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಇತ್ತೀಚೆಗೆ ಸುರಿದ ಮಳೆ ಅವಾಂತರದ ಬಳಿಕ ಎಚ್ಚೆತ್ತುಕೊಂಡು ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದೆ.
ಆದರೆ ಈ ಬಾರಿಯೂ ಬಿಬಿಎಂಪಿ ಪ್ರಭಾವಿಗಳಿಗೆ ಸೇರಿದ ಕಟ್ಟಡಗಳ ಸುದ್ದಿಗೆ ಹೋಗದೆ ಕೇವಲ ಶ್ರೀಸಾಮಾನ್ಯರಿಗೆ ಮಾತ್ರ ತೆರವು ಕಾರ್ಯಾಚರಣೆ ಸೀಮಿತಗೊಳಿಸಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವುದೇ ಒತ್ತಡಗಳಿಗೆ ಮಣಿಯದೆ ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತದಾ ಎಂಬ ಪ್ರಶ್ನೆ ಈಗ ಮನೆ ಮಾಡಿದೆ.