ಬೆಂಗಳೂರು: ಅತ್ಯಾಚಾರ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಚ್ ನಗರದಿಂದ ಗುರುವಾರ ತಡರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತಿದ್ದಂತೆ ಬಂಧನ ಪ್ರಕ್ರಿಯೆ ಆರಂಭವಾಗಲಿದೆ.
ಜನಪ್ರತಿನಿಧಿಗಳ ಕೋರ್ಟ್ ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿಯೇ ಅವರನ್ನು ಬಂಧಿಸಲಾಗುವುದು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ರೇವಣ್ಣ ಆಗಮಿಸುತ್ತಿದ್ದಂತೆ ಅವರನ್ನು ಬಂಧಿಸಲು ಈಗಾಗಲೇ ಎಸ್ಐಟಿ ಅಧಿಕಾರಿಗಳು ಕಾದು ಕುಳಿತಿದ್ದಾರೆ. ಇಮಿಗ್ರೇಶನ್ ಅಧಿಕಾರಿಗಳು ರಾಜ್ಯ ತಾಂತ್ರಿಕ ಪಾಸ್ಪೋರ್ಟ್ ಸೇರಿ ಕೆಲಸ ದಾಖಲಾತಿಗಳ ಪರಿಶೀಲನೆ ನಡೆಸಿ ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಿದ್ದಾರೆ. ನಂತರ ಎಸ್ಐಟಿಗೆ ಪ್ರಜ್ವಲ್ ರೇವಣ್ಣ ಅವರನ್ನು ಹಸ್ತಾಂತರ ಮಾಡಲಾಗುವುದು.
ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಲುಕೌಟ್ ನೋಟಿಸ್ ಮತ್ತು ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದ್ದು, ವಿಮಾನ ನಿಲ್ದಾಣದಲ್ಲಿ ಅವರ ಬಂಧನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಅವರ ಕುಟುಂಬದವರಿಗೆ ಮಾಹಿತಿ ನೀಡಿ ವಿಮಾನ ನಿಲ್ದಾಣದಿಂದ ಎಸ್ಐಟಿ ಕಚೇರಿಗೆ ಕರೆತರಲಾಗುತ್ತದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ರೇವಣ್ಣ ಬಂಧನ ಪ್ರಕ್ರಿಯೆ ನಡೆಯಲಿರುವ ಹಿನ್ನೆಲೆಯಲ್ಲಿ ಜನದಟ್ಟಣೆಯಲ್ಲಿ ಸಂಚಾರದಟ್ಟಣೆ ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಎಸ್ಐಟಿ ಅಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರಜ್ವಲ್ ಬಂಧನಕ್ಕೆ ವಿಮಾನ ನಿಲ್ದಾಣದಲ್ಲಿಯೇ ಬೀಡು ಬಿಟ್ಟಿರುವ ಅಧಿಕಾರಿಗಳು ಪ್ರಜ್ವಲ್ ಬರುತ್ತಿದ್ದಂತೆ ಬಂಧನ ಪ್ರಕ್ರಿಯೆ ಆರಂಭಿಸಲಿದ್ದಾರೆ.