ಮುಂಬೈ: ಉದ್ಧವ್ ಠಾಕ್ರೆ ರಾಜೀನಾಮೆ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದೆ. ನಾಳೆಯೇ ನೂತನ ಸಿಎಂ ಪ್ರಮಾಣವಚನ ಸ್ವೀಕಾರ ನಡೆಯುವ ಸಾಧ್ಯತೆ ಬಹುತೇಕ ಖಚಿತವಾಗಿದೆ.
ಶಿವಸೇನೆ ಬಂಡಾಯ ಶಾಸಕ ಏಕನಾಥ್ ಶಿಂಧೆ ವಿಶೇಷ ವಿಮಾನದಲ್ಲಿ ಮುಂಬೈಗೆ ಆಗಮಿಸಿದ್ದು, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಜತೆಗೂಡಿ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಬಳಿ ಪಡ್ನವಿಸ್ ಸರ್ಕಾರ ರಚನೆ ಹಕ್ಕು ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯಪಾಲರ ಸಮ್ಮತಿ ಪಡೆದು ನಾಳೆಯೇ ಬಿಜೆಪಿ ಸರ್ಕಾರ ರಚನೆಯಾಗುವ ಸಾಧ್ಯತೆ ಇದ್ದು, ಮಹಾರಾಷ್ಟ್ರದ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಏಕನಾಥ್ ಶಿಂಧೆ ಫಡ್ನವಿಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಲಿದ್ದಾರೆ.
ಇನ್ನು ಫಡ್ನವಿಸ್ ಜತೆ 8 ಶಾಸಕರು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಒಟ್ಟಾರೆ ನಾಳೆಯೇ ಮಹಾರಾಷ್ಟ್ರ ನೂತನ ಸಿಎಂ ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.