ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೊಸ ಸರ್ಕಾರದಲ್ಲಿ ಹಕ್ಕಾನಿಗಳಿಗೆ ಪ್ರಮುಖ ಖಾತೆಗಳನ್ನು ನೀಡಲಾಗಿದ್ದು, ಆಫ್ಘಾನಿಸ್ತಾನದ ನೂತನ ಪ್ರಧಾನಿಯಾಗಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ, ಉಪ ಪ್ರಧಾನಿಯಾಗಿ ಮುಲ್ಲಾ ಬರಾದರ್ ಅಖುಂದಾರನ್ನು ನೇಮಕ ಮಾಡಲಾಗಿದೆ.
ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಮಂಗಳವಾರ ತಾಲಿಬಾನ್ ಕಪಿಮುಷ್ಠಿಯಲ್ಲಿರುವ ಸರ್ಕಾರದ ಸದಸ್ಯರನ್ನು ಘೋಷಿಸಿದ್ದು, ಮೊಹಮ್ಮದ್ ಹಸನ್ ಅಖುಂದಾ ಸರ್ಕಾರದ ನೇತೃತ್ವ ವಹಿಸಲಿದ್ದಾರೆ. ತಾಲಿಬಾನ್ ಗುಂಪಿನ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ಉಪ ನಾಯಕರಾಗಿರುತ್ತಾರೆ ಎಂದು ಹೇಳಿದ್ದಾರೆ.
ತಾಲಿಬಾನ್ ಉಪ ನಾಯಕ ಸಿರಾಜುದ್ದೀನ್ ಹಕ್ಕಾನಿ ಹಂಗಾಮಿ ಆಂತರಿಕ ಸಚಿವರಾಗಿ, ಅಮೀರ್ ಖಾನ್ ಮುತ್ತಕಿ ಹಂಗಾಮಿ ವಿದೇಶಾಂಗ ಸಚಿವರಾಗಿ, ರಾಜಕೀಯ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್ ಜೈ ಹಂಗಾಮಿ ಉಪ ಮಂತ್ರಿಯಾಗಿ ಮತ್ತು ಮುಲ್ಲಾ ಯಾಕೂಬ್ ಅವರು ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇತರ ವಿವಿಧ ಸಚಿವಾಲಯಗಳ ಮುಖ್ಯಸ್ಥರನ್ನು ಶೀಘ್ರದಲ್ಲೇ ನೇಮಿಸಲಾಗುವುದು. ಅಫ್ಘಾನಿಸ್ತಾನ ಈಗ ಸ್ವಾತಂತ್ರ್ಯ ಪಡೆದುಕೊಂಡಿದೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.
ಕಳೆದ ತಿಂಗಳು ಆಫ್ಘನ್ ವಶಕ್ಕೆ ಪಡೆದ ತಾಲಿಬಾನ್ ತನ್ನ ಹಿಡಿತದಲ್ಲೇ ಸರ್ಕಾರ ರಚಿಸಿದೆ. ಆಗಸ್ಟ್ ಅಂತ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ನೇತೃತ್ವದ ಸೇನೆ ತೆರವು ಪೂರ್ಣಗೊಂಡ ನಂತರ ಸರ್ಕಾರ ರಚಿಸಿದ್ದು, ಮಹಿಳೆಯರಿಗೆ ಸರ್ಕಾರದಲ್ಲಿ ಅವಕಾಶ ನೀಡಿಲ್ಲ. ತಾಲಿಬಾನ್ ಸರ್ಕಾರಕ್ಕೆ ಆರ್ಥಿಕ ಮತ್ತು ಮಾನವೀಯ ಬಿಕ್ಕಟ್ಟು ಒಳಗೊಂಡಂತೆ ಹಲವಾರು ಪ್ರಮುಖ ಸಮಸ್ಯೆಗಳು ಎದುರಾಗಿವೆ.