
ಖ್ಯಾತ ನಟ ಅಕ್ಷಯ್ ಕುಮಾರ್ ಬಾಲಿವುಡ್ ನ ಅತ್ಯಂತ ಬೇಡಿಕೆಯುಳ್ಳ ಸೆಲೆಬ್ರಿಟಿಗಳ ಪೈಕಿ ಪ್ರಮುಖರು. ಅಕ್ಷಯ್ ಕುಮಾರ್ ನಟನೆ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಅದರಲ್ಲೂ ಸೈನಿಕರ ಕುರಿತು ವಿಶೇಷ ಅಭಿಮಾನ ಹೊಂದಿರುವ ಅಕ್ಷಯ್ ಕುಮಾರ್, ಸೈನಿಕ ಕಲ್ಯಾಣ ನಿಧಿಗೆ ದೊಡ್ಡ ಮಟ್ಟದ ದೇಣಿಗೆ ನೀಡಿದ್ದಾರೆ. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲೂ ಅಕ್ಷಯ್ ಕುಮಾರ್ ಸಾರ್ವಜನಿಕರಿಗೆ ನೆರವಾಗಿದ್ದರು.
ಹೀಗಾಗಿ ಅಕ್ಷಯ್ ಕುಮಾರ್ ಅವರ ಸಾಮಾಜಿಕ ಕಳಕಳಿ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಇತ್ತೀಚೆಗೆ ನಡೆದ ಬೆಳವಣಿಗೆಯೊಂದು ಅಕ್ಷಯ್ ಕುಮಾರ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದಲ್ಲಿ ಅಭಿಯಾನ ಆರಂಭವಾಗುವಂತೆ ಮಾಡಿತ್ತು.
ಅಕ್ಷಯ್ ಕುಮಾರ್ ತಂಬಾಕು ಉತ್ಪನ್ನ ವಿಮಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದಕ್ಕೆ ಅಭಿಮಾನಿಗಳು, ಸಾರ್ವಜನಿಕರಿಂದ ತೀವ್ರ ಟೀಕೆ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಮಹತ್ಚದ ನಿರ್ಧಾರ ಕೈಗೊಂಡಿರುವ ಅಕ್ಷಯ್ ಕುಮಾರ್, ಮುಂದಿನ ದಿನಗಳಲ್ಲಿ ಯಾವುದೇ ತಂಬಾಕು ಉತ್ಪನ್ನಗಳ ಜಾಹೀರಾತಿನಲ್ಲಿ ಪಾಲ್ಗೊಳ್ಳದಿರುವ ನಿರ್ಧಾರಕ್ಕೆ ಬಂದಿದ್ದಾರೆ. ಇಂದು ಬೆಳಿಗ್ಗೆ ಅವರು ಈ ಕುರಿತು ಸುದೀರ್ಘ ಪತ್ರ ಬರೆದಿದ್ದು, ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ವಿಮಲ್ ಜಾಹೀರಾತು ಈಗಾಗಲೇ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದರಿಂದ ಅದನ್ನು ನಾನು ನಿಲ್ಲಿಸಲು ಸಾಧ್ಯವಿಲ್ಲ ಎಂದಿರುವ ಅಕ್ಷಯ್ ಕುಮಾರ್, ಆದರೆ ಈ ಜಾಹೀರಾತಿನಿಂದ ಬಂದ ಸಂಪೂರ್ಣ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುವುದಾಗಿ ತಿಳಿಸಿದ್ದಾರೆ. ಒಪ್ಪಂದದ ಅವಧಿಯವರೆಗೂ ಸದ್ಯದ ಜಾಹೀರಾತು ಪ್ರಸಾರವಾಗಲಿದ್ದು, ಆ ಬಳಿಕ ಇದು ನಿಲ್ಲುತ್ತದೆ ಎಂದಿದ್ದಾರೆ.