ಮಂಗಳೂರು: ಗಾಂಜಾ ಹಾಗೂ ಮಾದಕ ವಸ್ತು ಪೆಡ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು, ವೈದ್ಯಕೀಯ ವಿದ್ಯಾರ್ಥಿ, ವಿದ್ಯಾರ್ಥಿಯರು ಸೇರಿದಂತೆ ಒಟ್ಟು 10 ಜನರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ಇಬ್ಬರು ವೈದ್ಯರು ಹಾಗೂ ವೈದ್ಯಕೀಯ, ದಂತ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ.
ಮಂಗಳೂರಿನ ಅಪಾರ್ಟ್ ಮೆಂಟ್ ವೊಂದರಲ್ಲಿ ಡ್ರಗ್ಸ್ ಮಾರಾಟ ಜಾಲದ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಇಂಗ್ಲೆಂಡ್ ಮೂಲದ ಪೆಡ್ಲರ್ ನೀಲ್ ಕಿಶೋರಿಲಾಲ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಮೇರೆಗೆ ಇಂದು ನಡೆಸಿದ ದಾಳಿಯಲ್ಲಿ ಮಂಗಳೂರು ಪೊಲೀಸರು 10 ಜನರನ್ನು ಬಂಧಿಸಿದ್ದಾರೆ.
ಬಂಧಿತರು ಕೆಎಂಸಿ ಅತ್ತಾವರ ಹಾಗೂ ಕೆಎಂಸಿ ಮಣಿಪಾಲ್, ಯೆನಪೋಯಾ ದೇರಳಕಟ್ಟೆ ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಾಗಿದ್ದಾರೆ.
24 ವರ್ಷದ ವಿದ್ಯಾರ್ಥಿನಿ ಡಾ.ನದಿಯಾ ಸಿರಾಜ್, 26 ವರ್ಷದ ವಿದ್ಯಾರ್ಥಿನಿ ಡಾ.ವರ್ಷಿಣಿ ಪ್ರತಿ, 22 ವರ್ಷದ ವಿದ್ಯಾರ್ಥಿನಿ ಡಾ.ರಿಯಾ ಚಡ್ಡಾ, 23 ವರ್ಷದ ವಿದ್ಯಾರ್ಥಿನಿ ಡಾ.ಹೀರಾ ಬಸಿನ್, 27 ವರ್ಷದ ವಿದ್ಯಾರ್ಥಿ ಡಾ.ಬಾನು ದಹಿಯಾ, 23 ವರ್ಷದ ವಿದ್ಯಾರ್ಥಿ ಡಾ.ಕ್ಷಿತಿಜ್ ಗುಪ್ತಾ ಹಾಗೂ ವೈದ್ಯರಾದ ಡಾ.ಸಮೀರ್, ಡಾ.ಮಣಿಮಾರನ್ ಮುತ್ತು ಹಾಗೂ ಸ್ಥಳೀಯ ಮೊಹಮ್ಮದ್ ರೌಫ್ ಸೇರಿ 10 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 2 ಕೆಜಿ ಗಾಂಜಾ, ನಕಲಿ ಪಿಸ್ತೂಲ್, ಡ್ರ್ಯಾಗರ್ ಗಳನ್ನು ವಶಕ್ಕೆ ಪಡೆಯಲಾಗಿದೆ.