50ಕ್ಕೂ ಅಧಿಕ ಶಾಸಕರ ಬಂಡಾಯದ ಕಾರಣಕ್ಕೆ ತಮ್ಮ ಸರ್ಕಾರ ಬಹುಮತ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ರಾತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉದ್ಧವ್ ರಾಜೀನಾಮೆ ನೀಡುತ್ತಿದ್ದಂತೆ ಬಿಜೆಪಿ ಪಾಳೆಯದಲ್ಲಿ ಸಂತಸ ಮನೆ ಮಾಡಿದ್ದು, ಸಿಹಿ ಹಂಚಿ ಸಂಭ್ರಮಿಸಲಾಗಿದೆ.
ಕಳೆದ ರಾತ್ರಿಯಿಂದಲೂ ವಾಣಿಜ್ಯ ನಗರಿ ಮುಂಬೈನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಮುಂದೆ ರಚನೆಯಾಗಲಿರುವ ತಮ್ಮ ಸರ್ಕಾರ ಯಾವ ಸ್ವರೂಪದಲ್ಲಿ ಇರಬೇಕು ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ.
ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯ ಎದ್ದಿರುವ ಶಾಸಕರುಗಳಿಗೂ ಸಹ ಸಂಪುಟದಲ್ಲಿ ಅವಕಾಶ ಕಲ್ಪಿಸಿಕೊಡಬೇಕಾಗಿದ್ದು ಹೀಗಾಗಿ ಬಿಜೆಪಿ ನಾಯಕರು ಚರ್ಚೆ ನಡೆಸಿದ್ದಾರೆ. ಅತ್ತ ಗುವಾಹಟಿಯಿಂದ ಗೋವಾಕ್ಕೆ ಬಂದಿರುವ ಬಂಡಾಯ ಶಾಸಕರುಗಳು ಸಭೆ ನಡೆಸಿ ಮುಂದಿನ ಸರ್ಕಾರದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.