ಅಫ್ಘಾನಿಸ್ತಾನದ ಪಶ್ಚಿಮ ಪಕ್ತಿಕಾ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪವಾಗಿದ್ದು, ಕನಿಷ್ಠ 155 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸುದ್ದಿ ಏಜೆನ್ಸಿ ವರದಿ ಮಾಡಿದೆ.
ಅಫ್ಘಾನಿಸ್ತಾನ ಸರ್ಕಾರಿ ಸ್ವಾಮ್ಯದ ಸುದ್ದಿ ಏಜೆನ್ಸಿ ಬಖ್ತಾರ್ ಪ್ರಕಾರ, ಪ್ರಾಥಮಿಕ ವರದಿಗಳನ್ವಯ ರಿಕ್ಟರ್ ಮಾಪಕದಲ್ಲಿ ಭೂಕಂಪದ ಪ್ರಮಾಣ 6 ಇದ್ದು, ಇದರಿಂದ 155 ಮಂದಿ ಸಾವನ್ನಪ್ಪಿದ್ದಾರೆ. ಆದರೆ, ಭೂಕಂಪದ ಪ್ರಮಾಣ ಪ್ರಬಲವಾಗಿರುವುದರಿಂದ ಸಾವು ನೋವು ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.
ಆಗ್ನೇಯ ಅಫ್ಘಾನಿಸ್ತಾನದ ಆಗ್ನೇಯ ಭಾಗದ ಹೆಚ್ಚು ಜನಸಂದಣಿ ಇರುವ ಖೋಸ್ಟ್ ನಗರದಿಂದ 44 ಕಿಲೋಮೀಟರ್ ದೂರದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು.
ಪಕ್ತಿಕಾ ಪ್ರಾಂತ್ಯದಲ್ಲೇ ಅಧಿಕ ಸಾವುನೋವುಗಳು ಸಂಭವಿಸಿದ್ದು, ಇಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, ಉಳಿದ ಪ್ರದೇಶಗಳಲ್ಲಿ 55 ಕ್ಕೂ ಹೆಚ್ಚು ಜನರು ದುರ್ಮರಣವನ್ನಪ್ಡಿದ್ದಾರೆ. 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಆಡಳಿತದ ವಿಪತ್ತು ನಿರ್ವಹಣೆ ಇಲಾಖೆಯ ಮುಖ್ಯಸ್ಥ ಮೊಹ್ಮದ್ ನಸ್ಸೀಮ್ ಹಕ್ಕಾನಿ ತಿಳಿಸಿದ್ದಾರೆ.
ಭೂಕಂಪ ಪೀಡಿತ ಪ್ರದೇಶಗಳಿಗೆ ತುರ್ತು ಚಿಕಿತ್ಸೆ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಹೆಲಿಕಾಪ್ಟರ್ ಗಳಲ್ಲಿ ಸಿಬ್ಬಂದಿಯನ್ನು ರವಾನಿಸಲಾಗಿದೆ. ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ಸಾಗಿವೆ ಎಂದು ಅವರು ಹೇಳಿದ್ದಾರೆ.