ನವದೆಹಲಿ: ನಯಾಬ್ ಸಿಂಗ್ ಸೈನಿ ಇಂದು ಹರಿಯಾಣದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಪಂಚಕುಲದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಉನ್ನತ ಬಿಜೆಪಿ ನಾಯಕರು ಭಾಗವಹಿಸಿದ್ದಾರೆ. ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಪ್ರಮಾಣ ವಚನ ಭೋದಿಸಿದರು.
ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಅವರ ಪ್ರತಿನಿಧಿಗಳು ಭಾಗವಹಿಸಿದ್ದರು.
ತಮ್ಮ ಮಾರ್ಗದರ್ಶಕ ಖಟ್ಟರ್ ಅವರನ್ನು ಮುಖ್ಯಮಂತ್ರಿಯಾಗಿ ಬದಲಿಸಿದ ತಿಂಗಳುಗಳ ನಂತರ, ಸೈನಿ ಅಕ್ಟೋಬರ್ 5 ರಂದು ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಐತಿಹಾಸಿಕ ವಿಜಯದತ್ತ ಮುನ್ನಡೆಸಿದರು, 90 ಸದಸ್ಯರ ಸದನದಲ್ಲಿ 48 ಸ್ಥಾನಗಳನ್ನು ಗಳಿಸಿದರು, ಪಕ್ಷಕ್ಕೆ ಸತತ ಮೂರನೇ ಅವಧಿಯನ್ನು ನೀಡಿದರು.
ಕುರುಕ್ಷೇತ್ರ ಜಿಲ್ಲೆಯ ಲಾಡ್ವಾ ಸ್ಥಾನದಿಂದ ಸ್ಪರ್ಧಿಸಿ ಗೆದ್ದ 54 ವರ್ಷದ ದಲಿತ ನಾಯಕನನ್ನು ಹರಿಯಾಣದಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನಂತರ ಅವರು ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಮುಂದಿನ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು.ಸೈನಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.