ಬೆಂಗಳೂರು : ಮುಡಾ’ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯಕ್ತ ಪೊಲೀಸರು ಹೈಕೋರ್ಟ್ ಗೆ ತನಿಖೆಯ ವರದಿ ಸಲ್ಲಿಕೆ ಮಾಡಿದ್ದಾರೆ.
‘ಮುಡಾ’ ಸೈಟ್ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯಕ್ತ ಪೊಲೀಸರು ಇದುವರೆಗೆ ನಡೆಸಿದ ತನಿಖೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸಾಮಾಜಿಕ ಹೋರಾಟಗಾರರ ಸ್ನೇಹಮಯಿ ಕೃಷ್ಣ ಮತ್ತಿತರರು ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೋಗಿದ್ದರು. ನಂತರ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲನೇ ಆರೋಪಿಯಾಗಿದ್ದು, ಅವರ ಪತ್ನಿ ಬಿ.ಎಂ. ಪಾರ್ವತಿ ಎರಡನೇ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಮೂರನೇ ಆರೋಪಿಯಾಗಿದ್ದಾರೆ. ಜಮೀನಿನ ಮಾಲೀಕ ದೇವರಾಜು ನಾಲ್ಕನೇ ಆರೋಪಿಯಾಗಿದ್ದಾರೆ.
ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ನೇತೃತ್ವದ ತಂಡ ಮೂರು ತಿಂಗಳಿಂದ ಮುಡಾ ಪ್ರಕರಣ ಸಂಬಂಧ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳ ವಿಚಾರಣೆ ನಡೆಸಿದೆ. ಮುಡಾ ಕಚೇರಿಯಲ್ಲಿನ ಸಂಬಂಧಿತ ದಾಖಲೆ, ಸಾಮಾನ್ಯ ಸಭೆ ನಡಾವಳಿ ಪರಿಶೀಲಿಸಿ ಅಗತ್ಯ ಮಾಹಿತಿ ಸಂಗ್ರಹಿಸಿ ತನಿಖಾ ವರದಿ ಸಿದ್ದಪಡಿಸಿ ಹೈಕೋರ್ಟ್ ಗೆ ಸಲ್ಲಿಸಿದೆ.