ಮಹಾಬೋಧಿ ಎಕ್ಸ್ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದು, ಹಲವು ಪ್ರಯಾಣಿಕರಿಗೆ ಗಾಯಗಳಾಗಿದೆ.
ರೈಲ್ವೆ ಹಳಿಯಲ್ಲಿ ಸಮಾಜ ವಿರೋಧಿ ಶಕ್ತಿಗಳು ವಿಧ್ವಂಸಕ ಕೃತ್ಯ ಎಸಗಲು ಪ್ರಯತ್ನಿಸಿದ್ದು, ಅವರನ್ನು ಬಂಧಿಸುವ ಪ್ರಯತ್ನಗಳ ನಡುವೆ ಸೋಮವಾರ ರಾತ್ರಿ ಈ ಘಟನೆ ಬೆಳಕಿಗೆ ಬಂದಿದೆ.ನವದೆಹಲಿಯಿಂದ ಬಿಹಾರದ ಗಯಾಕ್ಕೆ ಪ್ರಯಾಣಿಸುತ್ತಿದ್ದ ಮಹಾಬೋಧಿ ಎಕ್ಸ್ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಸಿಆರ್ಪಿಎಫ್ನ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಎಸ್ಪಿ ಸರೋಜ್ ಅವರು ಸಿಆರ್ಪಿಎಫ್ ಪಡೆಯೊಂದಿಗೆ ಪ್ರಯಾಗ್ರಾಜ್ ಜಂಕ್ಷನ್ಗೆ ಆಗಮಿಸಿದರು, ಆದರೆ ಅಷ್ಟೊತ್ತಿಗಾಗಲೇ ರೈಲು ಹೊರಟಿತ್ತು. ಸಿಆರ್ಪಿಎಫ್ ತಂಡವು ಶೋಧ ಕಾರ್ಯಾಚರಣೆ ನಡೆಸಿ ಮೂವರು ಶಂಕಿತರನ್ನು ಬಂಧಿಸಿದೆ. ಮಿರ್ಜಾಪುರ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಲಾಯಿತು. ಇಲ್ಲಿ, ಹೇಳಿಕೆಗಳನ್ನು ದಾಖಲಿಸಲಾಗಿದೆ ಮತ್ತು ಗಾಯಗೊಂಡ ಪ್ರಯಾಣಿಕರಿಗೆ ಚಿಕಿತ್ಸೆ ನೀಡಲಾಗಿದೆ.
ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದ್ದಕ್ಕಿದ್ದಂತೆ ಕಲ್ಲುಗಳನ್ನು ಎಸೆಯಲು ಪ್ರಾರಂಭಿಸಿದ್ದಾರೆ. ನಾನು ಕಿಟಕಿಯ ಬಳಿ ಕುಳಿತಿದ್ದೆ ಎಂದು ಬೇಗುಸರಾಯ್ ನಿವಾಸಿ ಪ್ರಯಾಣಿಕ ಸುಜಿತ್ ಕುಮಾರ್ ಹೇಳಿದ್ದಾರೆ. ಇವರ ತಲೆ ಮತ್ತು ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ. ಇತರ ಪ್ರಯಾಣಿಕರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಕಠಿಣ ಕ್ರಮ ಕೈಗೊಳ್ಳುವಂತೆ ರೈಲ್ವೆ ಆಡಳಿತವು ಆರ್ಪಿಎಫ್ಗೆ ಸೂಚನೆ ನೀಡಿದೆ ಎಂದು ಉತ್ತರ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಶಿಕಾಂತ್ ತ್ರಿಪಾಠಿ ಹೇಳಿದ್ದಾರೆ.