ಮುಂಬೈ: ಮಹಾರಾಷ್ಟ್ರ ಸರ್ಕಾರ ಔರಂಗಾಬಾದ್ ನಗರವನ್ನು ಸಂಭಾಜಿನಗರ, ಉಸ್ಮಾನಾಬಾದ್ ನಗರವನ್ನು ಧಾರಾಶಿವ್ ಎಂದು ಮರುನಾಮಕರಣ ಮಾಡಿದೆ.
ಮಹಾರಾಷ್ಟ್ರದ ಎರಡು ನಗರಗಳ ಹೆಸರು ಬದಲಾವಣೆಗೆ ಸಂಪುಟ ಸಭೆ ನಿರ್ಧರಿಸಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಔರಂಗಾಬಾದ್ ಹೆಸರನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡಲಾಗಿದೆ. ಉಸ್ಮಾನಾಬಾದ್ ನಗರದ ಹೆಸರನ್ನು ಧಾರಾಶಿವ್ ಎಂದು ಮರುನಾಮಕರಣ ಮಾಡಲಾಗಿದೆ. ನವೀಮುಂಬೈ ಏರ್ ಪೋರ್ಟ್ ಗೆ ಡಿ.ಬಿ. ಪಾಟೀಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರು ಇಡಲು ಸಂಪುಟ ಸಭೆ ಅಸ್ತು ಎಂದಿದೆ.
ಆಡಳಿತಾರೂಢ ಎಂವಿಎ ಒಕ್ಕೂಟದ ನೇತೃತ್ವದ ಶಿವಸೇನೆ ತನ್ನ ಬಹುಪಾಲು ಶಾಸಕರಿಂದ ಬಂಡಾಯ ಎದುರಿಸುತ್ತಿರುವಾಗಲೇ ಐತಿಹಾಸಿಕ ಕೇಂದ್ರ ಮಹಾರಾಷ್ಟ್ರ ನಗರವಾದ ಔರಂಗಾಬಾದ್ ಗೆ ಮರುನಾಮಕರಣ ಮಾಡುವ ಭಾವನಾತ್ಮಕ ವಿಷಯದ ಬಗ್ಗೆ ನಿರ್ಧಾರ ಕೈಗೊಂಡಿದೆ.
ರಾಜ್ಯ ಯೋಜನಾ ಸಂಸ್ಥೆ CIDCO ಈ ಹಿಂದೆ ನವಿ ಮುಂಬೈ ವಿಮಾನ ನಿಲ್ದಾಣಕ್ಕೆ ಶಿವಸೇನೆಯ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಹೆಸರನ್ನು ಇಡಲು ಪ್ರಸ್ತಾಪಿಸಿತ್ತು. ಮೊಘಲ್ ಚಕ್ರವರ್ತಿ ಔರಂಗಜೇಬ್ ಹೆಸರನ್ನು ಪಡೆದಿರುವ ಔರಂಗಾಬಾದ್ ನಗರದ ಮರುನಾಮಕರಣ ಮಾಡಲು ಬಿಜೆಪಿ ಆಗಾಗ ಒತ್ತಾಯಿಸಿತ್ತು.