ನವದೆಹಲಿ: ತಮ್ಮ ರಾಜ್ಯದ ಬಿಪಿಎಲ್ ಮತ್ತು ಉಜ್ವಲಾ ವರ್ಗದ ಜನರಿಗೆ ತಲಾ 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ಘೋಷಿಸಿದ್ದಾರೆ.
ಅಲ್ವಾರ್ ಜಿಲ್ಲೆಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಗೆಹ್ಲೋಟ್, ಬೆಲೆ ಏರಿಕೆ ವಿಚಾರ ಗಂಭೀರವಾಗಿದೆ. ಮುಂದಿನ ವರ್ಷ ಏಪ್ರಿಲ್ 1ರ ನಂತರ ಬಿಪಿಎಲ್ ಕುಟುಂಬಗಳಿಗೆ ತಲಾ 500 ರೂಪಾಯಿಯಂತೆ ವರ್ಷದಲ್ಲಿ 12 ಗ್ಯಾಸ್ ಸಿಲಿಂಡರ್ ನೀಡುತ್ತೇವೆ. ಸರ್ಕಾರದ ಕಲ್ಯಾಣ ಯೋಜನೆಗಳಿಂದ ಯಾರೂ ವಂಚಿತರಾಗಬಾರದು ಎಂದರು.
ನಮ್ಮ ಸರ್ಕಾರವು ವಿವರಗಳನ್ನು ಅಧ್ಯಯನ ಮಾಡುತ್ತಿದೆ. ಮುಂದಿನ ತಿಂಗಳು ವಿಧಾನಸಭೆಯಲ್ಲಿ ಬಜೆಟ್ ಮಂಡಿಸುತ್ತೇನೆ. ಕೇವಲ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ, ಉಳಿದ ಘೋಷಣೆಗಳನ್ನು ನಾನು ಬಜೆಟ್‌ನಲ್ಲಿ ಮಾಡುತ್ತೇನೆ. ಉಜ್ವಲ ಯೋಜನೆ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎಲ್‌ಪಿಜಿ ಕನೆಕ್ಷನ್ ಮತ್ತು ಗ್ಯಾಸ್ ಸ್ಟೌವ್ ಕೊಡುವ ನಾಟಕ ಮಾಡಿದ್ದಾರೆ. ಈಗ ಅವರ ಸಿಲಿಂಡರ್‌ಗಳು ಖಾಲಿ ಬಿದ್ದಿವೆ. ಎಲ್‌ಪಿಜಿ ಬೆಲೆ 400 ರೂ.ನಿಂದ 1040 ರೂ.ಗೆ ಏರಿಕೆಯಾಗಿರುವುದರಿಂದ ಯಾರೂ ಖರೀದಿಸುತ್ತಿಲ್ಲ. ಬಿಪಿಎಲ್ ಅಡಿಯಲ್ಲಿ ಬರುವ ಜನರು ಅಥವಾ ಉಜ್ವಲ ಯೋಜನೆಗೆ ಸಂಬಂಧಿಸಿರುವವರ ಅಧ್ಯಯನವನ್ನು ನಡೆಸುತ್ತೇವೆ. ಏಪ್ರಿಲ್ 1 ರಿಂದ ಅವರಿಗೆ 12 ಸಿಲಿಂಡರ್‌ಗಳು ಸಿಗುತ್ತವೆ. ಈಗಿನ ಬೆಲೆ 1040 ರೂ. ಬದಲಿಗೆ ಪ್ರತಿ ವರ್ಷಕ್ಕೆ 500 ರೂ. ದರದಲ್ಲಿ ನೀಡುತ್ತೇವೆ ಎಂದು ಹೇಳಿದ್ದಾರೆ.