ಬೆಂಗಳೂರು : ಕೊಡಿಗೆಹಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಹಾಗೂ ಗನ್ ಮ್ಯಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜಸ್ ಎಂಬುವವರು ನೀಡಿದ ದೂರಿನ ಮೇರೆಗೆ ಲಾಯರ್ ಜಗದೀಶ್ ಹಾಗೂ ಗನ್ ಮ್ಯಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಗಲಾಟೆಯಲ್ಲಿ ಲಾಯರ್ ಜಗದೀಶ್ ಅವರು ಗಾಯಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಮಾತನಾಡಿದ್ದರು. ನಿನ್ನೆ ನಡೆದ ಘಟನೆಯಲ್ಲಿ ಜಗದೀಶ್ ಗಾಯಗೊಂಡಿದ್ದಕ್ಕೆ ಪೊಲೀಸರೇ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಮೆಡಿಕಲ್ ಚೆಕಪ್ ಮಾಡಿಸಿ ಪೊಲೀಸರು ಜಗದೀಶ್, ಅವರ ಮಗ ಆರ್ಯನ್ ಹಾಗೂ ಇಬ್ಬರು ಗನ್ ಮ್ಯಾನ್ಗಳನ್ನು ಅರೆಸ್ಟ್ ಮಾಡಿದ್ದಾರೆ.ಇಂದು 11 ಗಂಟೆಯ ಬಳಿಕ ಜಗದೀಶ್ರನ್ನು ನ್ಯಾಯಾಲಯದ ಮುಂದೆ ಪೊಲೀಸರು ಹಾಜರು ಪಡಿಸಲಿದ್ದಾರೆ . ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ಅಣ್ಣಮ್ಮ ದೇವಿಯ ಉತ್ಸವದ ವಿಚಾರವಾಗಿ ಬಿಗ್ ಬಾಸ್ ಸ್ಪರ್ಧಿ ಜಗದೀಶ್ ಹಾಗೂ ಸ್ಥಳೀಯರ ಮಧ್ಯೆ ಮಾರಾಮಾರಿಯಾಗಿದೆ.
ಘಟನೆ ಹಿನ್ನೆಲೆ
ಬಿಗ್ ಬಾಸ್’ ಸ್ಪರ್ಧಿ ಮತ್ತು ವಕೀಲ ಕೆ.ಎಂ. ಜಗದೀಶ್ ಕುಮಾರ್ ಅವರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದು, ಈ ವೇಳೆ ವಕೀಲರ ಗನ್ ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಶುಕ್ರವಾರ ರಾತ್ರಿ ಕೊಡಿಗೇನಹಳ್ಳಿಯಲ್ಲಿ ನಡೆದಿತ್ತು.
ಅಣ್ಣಮ್ಮ ದೇವಿ ಉತ್ಸವದ ವಿಷಯವಾಗಿ ಸ್ಥಳೀಯರು ಮತ್ತು ಜಗದೀಶ್ ನಡುವೆ ಜಗಳವಾಗಿದ್ದು, ರೊಚ್ಚಿಗೆದ್ದ ಸ್ಥಳೀಯರು ಜಗದೀಶ್ ಮನೆಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಜಗದೀಶ್ ಹಾಗೂ ಅವರ ಗನ್ ಮ್ಯಾನ್ ಮೇಲೆ ಹಲ್ಲೆ ನಡೆಸಲಾಗಿದೆ. ಆತ್ಮ ರಕ್ಷಣೆಗಾಗಿ ಜಗದೀಶ್ ಅವರ ಗನ್ ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದು, ಜಗದೀಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನಡೆಸಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೂಗಿನಿಂದ ರಕ್ತ ಸೋರುತ್ತಿದ್ದರೂ ಜಗದೀಶ್ ಫೇಸ್ ಬುಕ್ ಲೈವ್ ಗೆ ಬಂದು ಆದ ಘಟನೆಯ ಬಗ್ಗೆ ತಿಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.