ಬೆಂಗಳೂರು : ಕರ್ನಾಟಕ ಬಂದ್ ಗೆ ನಮ್ಮ ನೈತಿಕ ಬೆಂಬಲವಿದೆ, ರಾಜ್ಯಾದ್ಯಂತ ನಾಳೆ ಎಂದಿನಂತೆ ಖಾಸಗಿ ಬಸ್ ಗಳ ಸಂಚಾರ ಇರಲಿದೆ ಎಂದು ಬಸ್ ಮಾಲೀಕರ ಸಂಘಟನೆ ಅಧ್ಯಕ್ಷ ಕುಯ್ಲಾಡಿ ಸುರೇಶ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಜ್ಯಾದ್ಯಂತ ನಾಳೆ ಎಲ್ಲಾ ಜಿಲ್ಲೆಗಳಲ್ಲಿ ಎಂದಿನಂತೆ ಖಾಸಗಿ ಬಸ್ ಗಳ ಸಂಚಾರ ಇರಲಿದೆ, ನಾವು ಸಾರ್ವಜನಿಕರಿಗೆ ತೊಂದರೆ ಮಾಡೋಲ್ಲ. ಕರ್ನಾಟಕ ಬಂದ್ ಗೆ ನಮ್ಮ ನೈತಿಕ ಬೆಂಬಲವಿದೆ ಎಂದು ಅವರು ಹೇಳಿದರು.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಳೆದ ತಿಂಗಳು ಮರಾಠಿ ಗೊತ್ತಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವುದನ್ನು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳನ್ನು ಪ್ರತಿನಿಧಿಸುವ ಕನ್ನಡ ಒಕ್ಕೂಟ ಮಾರ್ಚ್ 22 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಮಾ.22 ರಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಬಂದ್ ಘೋಷಿಸಲಾಗಿದೆ.
ಆದಾಗ್ಯೂ, ಕೆಲವು ಸಂಘಟನೆಗಳು ಮತ್ತು ಒಕ್ಕೂಟಗಳು ಬಂದ್ಗೆ ಬೆಂಬಲ ನೀಡದಿರಲು ನಿರ್ಧರಿಸಿವೆ ಅಥವಾ ನೈತಿಕ ಬೆಂಬಲವನ್ನು ಮಾತ್ರ ನೀಡಲು ನಿರ್ಧರಿಸಿವೆ.ಟಿ.ಎ.ನಾರಾಯಣಗೌಡ, ಪ್ರವೀಣ್ ಶೆಟ್ಟಿ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಬಣಗಳು ಸೇರಿದಂತೆ ಪ್ರಮುಖ ಕನ್ನಡ ಪರ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿಲ್ಲ