ಬೆಂಗಳೂರು : ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡಗೆ ಜಾಮೀನು ಮಂಜೂರು ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿನ 5ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.
ಕನ್ನಡ ಭಾಷೆಗಾಗಿ ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದರು. ಸಂಸ್ಥೆ , ಹೋಟೆಲ್ ಹಾಗೂ ಕಟ್ಟಡಗಳಲ್ಲಿ ಕನ್ನಡ ನಾಮಫಲಕ ಇಲ್ಲದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಬೋರ್ಡ್ ಧ್ವಂಸಗೊಳಿಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಪೊಲೀಸರು ಹಲವಾರು ಕಾರ್ಯಕರ್ತರನ್ನು ಬಸ್ ನಲ್ಲಿ ತುಂಬಿಸಿಕೊಂಡು ಹೋಗಿದ್ದರು. ಬೆಂಗಳೂರಿನ ಹುಣಸಮಾರಹಳ್ಳಿಯಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ನಂತರ ಅವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಮಂಜೂರು ಆದೇಶ ಹೊರಡಿಸಿದೆ.ಕನ್ನಡದಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸುವಂತೆ ಒತ್ತಾಯಿಸಿ ಕರವೇ ಬೆಂಗಳೂರಿನ ರಸ್ತೆಗಳಲ್ಲಿ ಇಂಗ್ಲಿಷ್ ಪೋಸ್ಟರ್ಗಳನ್ನು ಹರಿದು ಹಾಕಿತು. ಬೆಂಗಳೂರಿನ ವಾಣಿಜ್ಯ ಸಂಸ್ಥೆಗಳು ಫೆಬ್ರವರಿ 28, 2024 ರೊಳಗೆ ತಮ್ಮ ನಾಮಫಲಕದಲ್ಲಿ ಶೇಕಡಾ 60 ರಷ್ಟು ಕನ್ನಡವನ್ನು ಬಳಸಬೇಕೆಂದು ಬಿಬಿಎಂಪಿಯ ಆದೇಶದ ಹಿನ್ನೆಲೆಯಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಕರವೆ ಕಾರ್ಯಕರ್ತರು ದೇವನಹಳ್ಳಿ ಬಳಿ, ಲ್ಯಾವೆಲ್ಲಿ ರಸ್ತೆಯಲ್ಲಿ, ಯುಬಿ ಸಿಟಿ ಬಳಿ ಹಲವು ಇಂಗ್ಲಿಷ್ ನಾಮಫಲಕಗಳಿಗೆ ಕಪ್ಪು ಮಸಿ ಬಳಿದು, ನಾಮಫಲಕಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು . ದೊಡ್ಡ ದೊಡ್ಡ ಜಾಹೀರಾತು ಫಲಕ ಏರಿ ಇಂಗ್ಲೀಷ್ ನಾಮಫಲಕಗಳನ್ನು ಹರಿದು ಹಾಕಿದ್ದರು. ಕೆಲವು ಕಡೆ ಕಲ್ಲು ತೂರಾಟ ಕೂಡ ನಡೆದಿತ್ತು.