ಶಿವಮೊಗ್ಗ : ಬಿಜೆಪಿ ವಿರುದ್ಧ ಬಂಡಾಯ ಸಾರಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಹೌದು, ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಲೋಕಸಭಾ ಅಖಾಡಕ್ಕೆ ಇಳಿದಿದ್ದಾರೆ. ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರ ಕಣದಲ್ಲಿದ್ದಾರೆ. ಈಶ್ವರಪ್ಪ ಅವರು ಬೆಂಬಲಿಗರ ಜೊತೆ ಮೆರವಣಿಗೆಯಲ್ಲಿ ಶಿವಮೊಗ್ಗ ಡಿಸಿ ಕಚೇರಿಗೆ ತೆರಳಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಈಶ್ವರಪ್ಪ ‘ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದೇನೆ, ನನ್ನ ಬೆಂಬಲಿಗರು , 25-30 ಸಾವಿರ ಜನರು ನನ್ನ ಜೊತೆ ಮೆರವಣಿಗೆಯಲ್ಲಿ ಬಂದು ನನಗೆ ಆಶೀರ್ವಾದ ಮಾಡಿದ್ದಾರೆ ನನಗೆ ಗೆದ್ದು ಬನ್ನಿ ಎಂದು ಶುಭವನ್ನು ಕೋರಿದ್ದಾರೆ’ ಎಂದರು.
‘ಬಿಜೆಪಿಯ ಒಬ್ಬ ನಿಷ್ಟಾವಂತ ಕಾರ್ಯಕರ್ತನಿಗೆ ಯಾಕೆ ನೋವಾಗಿದೆ. ಹಿಂದುತ್ವಕ್ಕೆ ಏನು ಅನ್ಯಾಯವಾಗಿದೆ. ಅಪ್ಪ-ಮಕ್ಕಳ ಕೈಯಲ್ಲಿ ಯಾಕೆ ಈ ಪಕ್ಷ ಇದೆ ಎಂಬುದನ್ನು ನಮ್ಮ ಕಾರ್ಯಕರ್ತರು ಪ್ರತಿ ಮನೆಗೆ ಹೋಗಿ ಹೇಳಿಬರುತ್ತಾರೆ. ಶಿವಮೊಗ್ಗದ ಬೆಂಬಲಿಗರು ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದು ಈಶ್ವರಪ್ಪ ಅವರು ಹೇಳಿದರು.