ಗಾಝಾ : ಗಾಝಾ ನಗರದಲ್ಲಿ ಭಾನುವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 25 ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಮೂಲಗಳು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಝಾ ನಗರದ ಜೈಟೌನ್ ನೆರೆಹೊರೆಯ ವಸತಿ ಕಟ್ಟಡದ ಮೇಲೆ ಯುದ್ಧ ವಿಮಾನಗಳು ದಾಳಿ ನಡೆಸಿದ ಪರಿಣಾಮ ಮಕ್ಕಳು ಸೇರಿದಂತೆ ಹದಿನೈದು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಗಳು ವರದಿ ಮಾಡಿದೆ.
ಸ್ಥಳೀಯ ಮೂಲಗಳು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಯುದ್ಧ ವಿಮಾನಗಳು ಯಾವುದೇ ಮುನ್ಸೂಚನೆಯಿಲ್ಲದೆ ಮೂರು ಅಂತಸ್ತಿನ ಮನೆಯ ಮೇಲೆ ಕ್ಷಿಪಣಿ ಹಾರಿಸಿದವು.
ಇಸ್ರೇಲ್ ನ ಸರ್ಕಾರಿ ಸ್ವಾಮ್ಯದ ಕಾನ್ ಟಿವಿ ಸುದ್ದಿಯ ಪ್ರಕಾರ, ಇಸ್ರೇಲ್ ಸೇನೆಯು ಫೆಬ್ರವರಿ 20 ರಿಂದ ನೆರೆಹೊರೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ, ಹಮಾಸ್ ಚಳವಳಿಗೆ ಸೇರಿದ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದೆ. ಅದೇ ದಿನ, ಗಾಝಾ ನಗರದ ಪಶ್ಚಿಮದ ಕರಾವಳಿ ರಸ್ತೆಯಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 10 ಫೆಲೆಸ್ತೀನೀಯರು ಮೃತಪಟ್ಟಿದ್ದರು.